ಇಸ್ಲಾಮಾಬಾದ್, ಮಂಗಳವಾರ, 7 ಸೆಪ್ಟೆಂಬರ್ 2010( 17:48 IST )
ಲಷ್ಕರ್ ಇ ತೊಯ್ಬಾದ ಉಗ್ರ ಡೇವಿಡ್ ಹೆಡ್ಲಿ ಕುರಿತಂತೆ ಕೇಳಿದ್ದ ಪ್ರಶ್ನೆಗೆ ಭಾರತ ನೀಡಿರುವ ಉತ್ತರ ಸಮಾಧಾನ ತಂದಿಲ್ಲ ಎಂದು ಪಾಕಿಸ್ತಾನ ಮತ್ತೊಂದು ಕ್ಯಾತೆ ತೆಗೆದಿದೆ.
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಅಮೆರಿಕದ ಎಫ್‌ಬಿಐ ಬಂಧನದಲ್ಲಿರುವ ಡೇವಿಡ್ ಹೆಡ್ಲಿ ಕುರಿತ ಪ್ರಶ್ನೆಗೆ ಭಾರತ ನೀಡಿರುವ ಉತ್ತರ ಅಸಮರ್ಪಕವಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಹೆಡ್ಲಿ ಕುರಿತಂತೆ ಕೇಳಿದ ಪ್ರಶ್ನೆಗೆ ಭಾರತದ ಉತ್ತರ ತುಂಬಾ ಪ್ರಸ್ತುತವಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಾಕ್‌ನ ಡಾನ್ ಪತ್ರಿಕೆಯ ವರದಿ ತಿಳಿಸಿದೆ.
2008ರ ಮುಂಬೈ ದಾಳಿ ಪ್ರಕರಣ ಕುರಿತಂತೆ ಹೆಡ್ಲಿಯ ಪಾತ್ರವೇನು ಎಂಬ ಕುರಿತು ಕಳೆದು ತಿಂಗಳು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಭಾರತಕ್ಕೆ 50 ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿತ್ತು.
ಇದೀಗ ಭಾರತ ನೀಡಿರುವ ನೂತನ ದಾಖಲೆಯಲ್ಲಿ ಹೆಡ್ಲಿ ಕುರಿತ ಪ್ರಶ್ನೆಯ ಉತ್ತರವನ್ನು ಕಾನೂನು ತಜ್ಞರು ಪರಿಶೀಲಿಸಿರುವುದಾಗಿ ಪಾಕಿಸ್ತಾನ ತಿಳಿಸಿದೆ. ಆದರೆ ಹೆಡ್ಲಿ ಪಾತ್ರದ ಕುರಿತು ಕೇಳಿದ ಪ್ರಶ್ನೆಗೆ ಭಾರತ ನೀಡಿರುವ ಉತ್ತರ ಸಮಾಧಾನ ತಂದಿಲ್ಲ ಎಂದು ಪಾಕ್ ಅಸಮಾಧಾನ ವ್ಯಕ್ತಪಡಿಸಿದೆ.