ವಾಷಿಂಗ್ಟನ್, ಬುಧವಾರ, 8 ಸೆಪ್ಟೆಂಬರ್ 2010( 18:11 IST )
ನೂತನ ಪ್ರಧಾನಿ ಆಯ್ಕೆಗಾಗಿ ಏಳು ಬಾರಿ ಚುನಾವಣೆ ನಡೆಸಿಯೂ ವಿಫಲವಾಗಿರುವ ಹಿನ್ನೆಲೆಯಲ್ಲಿ ನೇಪಾಳದ ರಾಜಕೀಯ ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬಂದು ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಪ್ರಯತ್ನಿಸುವಂತೆ ಅಮೆರಿಕ ಮನವಿ ಮಾಡಿಕೊಂಡಿದೆ.
ನೇಪಾಳದ ರಾಜಕೀಯ ಬಿಕ್ಕಟ್ಟು ಮತ್ತು ಪ್ರಧಾನಿ ಆಯ್ಕೆ ಕುರಿತು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನೂತನ ಪ್ರಧಾನಿ ಆಯ್ಕೆಗಾಗಿ ನೇಪಾಳದಲ್ಲಿ ಏಳು ಸಲ ಚುನಾವಣೆ ನಡೆದರೂ ಕೂಡ ಅದು ವಿಫಲವಾಗುವ ಮೂಲಕ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕ್ರೌಲೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ನೇಪಾಳದಲ್ಲಿ 250 ವರ್ಷಗಳ ರಾಜಪ್ರಭುತ್ವವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡಿತ್ತು. ಇದರಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಶಸ್ತ್ರ ಹೋರಾಟ ನಡೆಸಿದ ಮಾವೋಗಳ ಪಾತ್ರ ಪ್ರಮುಖವಾದದ್ದು. ಆದರೆ ಇದೀಗ ಮಾವೋಗಳ ದ್ವಂದ್ವ ನಿಲುವಿನಿಂದಾಗಿ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವುದು ದೊಡ್ಡ ದುರಂತ ಎಂದು ಕ್ರೌಲೆ ಅಭಿಪ್ರಾಯವ್ಯಕ್ತಪಡಿಸಿದರು.