ಹಣಕಾಸು ಸಚಿವಾಲಯದಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಗುಸ್‌ಮಾವೋ ಹಾಗೂ ಸಾರ್ವಜನಿಕರ ಒತ್ತಡ ಹೆಚ್ಚಿದ ಪರಿಣಾಮ ಪೂರ್ವ ತೈಮೂರ್‌ನ ಉಪ ಪ್ರಧಾನಿ ಮಾರಿಯೋ ಕಾರ್ರಸ್ಕಾಲೋ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
'ಭ್ರಷ್ಟಾಚಾರದ ವಿಚಾರದಲ್ಲಿ ತನ್ನನ್ನು ಬಹಿರಂಗವಾಗಿ ತೇಜೋವಧೆ ಮಾಡಿರುವುದನ್ನು ತಾನು ಸಹಿಸಿಕೊಳ್ಳಲಾರೆ' ಎಂದು ಕಾರ್ರಸ್ಕಾಲೋ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ 300 ಮಿಲಿಯನ್ ಡಾಲರ್ ಭ್ರಷ್ಟಾಚಾರ ಪ್ರಕರಣದ ಆರೋಪದಲ್ಲಿ ಕಾರ್ರಸ್ಕಾಲೋ ಶಾಮೀಲಾಗಿರುವುದಕ್ಕೆ ಪ್ರಧಾನಿ ಗುಸ್‌ಮಾವೋ, ಕಾರ್ರಸ್ಕಾಲೋ ಅವರನ್ನು ಮೂರ್ಖ ಸುಳ್ಳುಗಾರ ಎಂದು ಬಹಿರಂಗವಾಗಿ ಟೀಕಿಸಿದ್ದರು.
'ನನ್ನ 73ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬ (ಪ್ರಧಾನಿ) ಮೂರ್ಖ ಸುಳ್ಳುಗಾರ ಎಂದು ಆರೋಪಿಸಿದ್ದಾರೆ. ಹಾಗಾಗಿ ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಅದಕ್ಕೆ ಪ್ರತಿಕ್ರಿಯೆ ಎಂಬಂತೆ ನಾನು ಉಪ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.