ವಾಷಿಂಗ್ಟನ್, ಗುರುವಾರ, 9 ಸೆಪ್ಟೆಂಬರ್ 2010( 14:58 IST )
ಜಾಗತಿಕ ವಿರೋಧದ ನಡುವೆಯೂ ಫ್ಲೋರಿಡಾದ ಚರ್ಚ್ ಸೆಪ್ಟೆಂಬರ್ 11ರಂದು ಇಸ್ಲಾಮ್‌ನ ಪವಿತ್ರ ಗ್ರಂಥ ಕುರಾನ್ ಅನ್ನು ಸುಡುವುದು ಖಚಿತ ಎಂದು ಪುನರುಚ್ಚರಿಸಿದೆ.
ಸೆ.11ರಂದು ಕುರಾನ್ ಸುಡುವ ಫ್ಲೋರಿಡಾ ಚರ್ಚ್‌ನ ನಿರ್ಧಾರಕ್ಕೆ ಅಮೆರಿಕದ ಅಧಿಕಾರಿಗಳು, ಮಿಲಿಟರಿ, ವ್ಯಾಟಿಕನ್ ಹಾಗೂ ವಿವಿಧ ಧರ್ಮದ ಮುಖಂಡರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕುರಾನ್ ಸುಡುವ ನಿರ್ಧಾರವನ್ನು ಕೈಬಿಟ್ಟು ಕೋಮು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಫ್ಲೋರಿಡಾ ಚರ್ಚ್, 2001ರ ಸೆಪ್ಟೆಂಬರ್ 11ರ ಭಯೋತ್ಪಾದನಾ ದಾಳಿಯ 9ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಕುರಾನ್ ಸುಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
'ಈ ಸಂದರ್ಭದಲ್ಲಿ ನಾವು ನಮ್ಮ ನಿರ್ಧಾರವನ್ನು ಬದಲಾಯಿಸುವ ಉದ್ದೇಶ ಹೊಂದಿಲ್ಲ' ಎಂದು ಫ್ಲೋರಿಡಾ ಚರ್ಚ್ ಪಾದ್ರಿ ಟೆರ್ರಿ ಜೋನ್ಸ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕುರಾನ್ ಸುಡುವ ನಮ್ಮ ನಿರ್ಧಾರಕ್ಕೆ ಬೆಂಬಲ ಸೂಚಿಸಿ ವಿಶ್ವದಾದ್ಯಂತದಿಂದ ಸಾವಿರಾರು ಸಂದೇಶಗಳನ್ನು ಸ್ವೀಕರಿಸಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.