ರಶ್ಯಾದ ಪ್ರಮುಖ ನಗರದ ಸೆಂಟ್ರಲ್ ಮಾರ್ಕೆಟ್ನಲ್ಲಿ ಆತ್ಮಹತ್ಯಾ ಕಾರ್ ಬಾಂಬರ್ ದಾಳಿ ನಡೆಸಿದ ಪರಿಣಾಮ ಸುಮಾರು 15 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಗುರುವಾರ ಕಾಕಾಸಸ್ನಲ್ಲಿ ನಡೆದಿದೆ.
ವ್ಲಾಡಿಕಾವ್ಕಾಜ್ ಮಾರುಕಟ್ಟೆಯ ಪ್ರಮುಖ ಬಾಗಿಲಿನಲ್ಲಿಯೇ ಕಾರನ್ನು ಒಳನುಗ್ಗಿಸಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಲ್ಲಿ ಆತ್ಮಹತ್ಯಾ ಬಾಂಬರ್ ಸೇರಿದಂತೆ 15 ಮಂದಿ ಬಲಿಯಾಗಿದ್ದಾರೆ ಎಂದು ರಷ್ಯಾ ದಕ್ಷಿಣ ಪ್ರದೇಶದ ತುರ್ತು ಪರಿಸ್ಥಿತಿ ಸಚಿವಾಲಯದ ಅಲೆಗ್ಸಾಂಡರ್ ಪೋಗೋರ್ಲೆ ವಿವರಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.