ತೆಹ್ರಾನ್, ಮಂಗಳವಾರ, 21 ಸೆಪ್ಟೆಂಬರ್ 2010( 18:01 IST )
ಮಾದಕ ದ್ರವ್ಯ ಸಾಗಾಣೆಯಲ್ಲಿ ದೋಷಿತರಾದ ಮೂರು ಮಂದಿಯನ್ನು ಇರಾನ್ ಗಲ್ಲಿಗೇರಿಸಿರುವುದಾಗಿ ಇಸ್ನಾ(ಐಎಸ್ಎನ್ಎ) ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
ಆದರೆ ಮೂರು ಮಂದಿಯನ್ನು ಯಾವಾಗ ಗಲ್ಲಿಗೇರಿಸಲಾಯಿತು ಎಂಬ ವಿವರನ್ನು ವರದಿಯಲ್ಲಿ ನೀಡಿಲ್ಲ. ಪ್ರಸಕ್ತ ಸಾಲಿನಲ್ಲಿ ಇರಾನ್ 116 ಮಂದಿಯನ್ನು ಗಲ್ಲಿಗೇರಿಸಿರುವುದಾಗಿ ಮಾಧ್ಯಮದ ವರದಿಯನ್ನು ಆಧರಿಸಿ ಎಎಫ್‌ಪಿ ವರದಿ ಹೇಳಿದೆ. 2009ರಲ್ಲಿ ಸುಮಾರು 270 ಮಂದಿಯನ್ನು ಗಲ್ಲಿಗೇರಿಸಲಾಗಿತ್ತು.
ಸಾರ್ವಜನಿಕ ರಕ್ಷಣೆಯ ಹಿತದೃಷ್ಟಿಯಿಂದ ಆರೋಪಿತರಿಗೆ ಮರಣದಂಡನೆಯನ್ನು ಜಾರಿಗೊಳಿಸಿರುವುದಾಗಿ ಇರಾನ್ ತಿಳಿಸಿದ್ದು, ನ್ಯಾಯಾಂಗ ಪ್ರಕ್ರಿಯೆಯ ನಂತರ ಶಿಕ್ಷೆಯನ್ನು ನೀಡಿರುವುದಾಗಿ ಹೇಳಿದೆ.
ಕೊಲೆ, ಅತ್ಯಾಚಾರ, ದರೋಡೆ ಹಾಗೂ ಮಾದಕ ದ್ರವ್ಯ ಸಾಗಾಣೆ ಆರೋಪಿತರಿಗೆ ಇಸ್ಲಾಮಿಕ್ ರಿಪಬ್ಲಿಕ್ ದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಇರಾನ್ ಪ್ರತಿವರ್ಷ ನೂರಾರು ಆರೋಪಿಗಳನ್ನು ಗಲ್ಲಿಗೇರಿಸುತ್ತದೆ. ಅದೇ ರೀತಿ ಚೀನಾ, ಸೌದಿ ಅರೇಬಿಯಾ ಮತ್ತು ಅಮೆರಿಕದಲ್ಲಿಯೂ ಗಲ್ಲುಶಿಕ್ಷೆ ನೀಡಲಾಗುತ್ತದೆ.