ಇಸ್ಲಾಮಾಬಾದ್, ಬುಧವಾರ, 22 ಸೆಪ್ಟೆಂಬರ್ 2010( 15:24 IST )
ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಿರುದ್ಧದ ಸ್ವಿಜರ್‌ಲ್ಯಾಂಡ್‌ನಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಮರು ತನಿಖೆ ಕುರಿತಂತೆ ಪಾಕ್ ಸುಪ್ರೀಂಕೋರ್ಟ್ ಬುಧವಾರ ಅಧಿಕಾರಿಗಳಿಗೆ ಸೆಪ್ಟೆಂಬರ್ 24ರವರೆಗೆ ಅಂತಿಮ ಗಡುವು ವಿಧಿಸಿದೆ.
ಅಲ್ಲದೇ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಅಧಿಕಾರಿಗಳನ್ನೂ ಬಂಧಿಸುವಂತೆಯೂ ಅಪೆಕ್ಸ್ ಕೋರ್ಟ್ ಆದೇಶ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸ್ವಯಂ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಪೀಠದ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ, ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೋರಿ ಈವರೆಗೂ ಸ್ವಿಸ್ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಪತ್ರವನ್ನು ಯಾಕೆ ಕಳುಹಿಸಿಲ್ಲ ಎಂದು ಅಟಾರ್ನಿ ಜನರಲ್ ಅವರನ್ನು ತೀವ್ರವಾಗಿ ತೆಗೆದುಕೊಂಡರು.
ಪ್ರಕರಣದ ವಿಚಾರಣೆ ವೇಳೆ ಸರಕಾರದ ನಿರ್ಲಕ್ಷ್ಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ಬಗ್ಗೆ ಸರಕಾರದ ನಿಲುವು ಏನು ಎಂಬುದನ್ನು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಸ್ಪಷ್ಟಪಡಿಸುವಂತೆ ಕಾನೂನು ಕಾರ್ಯದರ್ಶಿ ಮಸೂದ್ ಚಿಸ್ತಿಗೆ ಸೂಚನೆ ನೀಡಿದೆ.
ಸ್ವಿಜರ್‌ಲ್ಯಾಂಡ್‌ನಲ್ಲಿನ ಭ್ರಷ್ಟಾಚಾರ ಪ್ರಕರಣ ಮರು ತನಿಖೆ ಪ್ರಸ್ತಾಪ ಪ್ರಧಾನಿ ಗಿಲಾನಿ ಅವರ ಬಳಿ ಇದ್ದು, ಆ ನಿಟ್ಟಿನಲ್ಲಿ ಈ ಬಗ್ಗೆ ಸರಕಾರದ ನಿಲುವು ತಿಳಿಸಲು ಇನ್ನೂ ಮೂರು ದಿನಗಳ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಚಿಸ್ತಿ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.