ತಾಲಿಬಾನ್ ಉಗ್ರಗಾಮಿಗಳು ಮಹಿಳೆಯೊಬ್ಬಳನ್ನು ಕಲ್ಲು ಹೊಡೆದು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ಓರ್ಕಾಜೈನಲ್ಲಿ ನಡೆದಿದೆ.
ಈ ಅಮಾನವೀಯ ಘಟನೆ ನಡೆದು ಎರಡು ತಿಂಗಳು ಕಳೆದಿದ್ದು, ತಾಲಿಬಾನ್ ಸಂಘಟನೆಯ ಸದಸ್ಯನೊಬ್ಬ ಘಟನೆಯ ಚಿತ್ರಣದ ವೀಡಿಯೋವನ್ನು ದುಬೈ ಮೂಲದ ಅಲ್ ಆನ್ ಟಿವಿ ಚಾನೆಲ್‌ಗೆ ರಸಹ್ಯವಾಗಿ ರವಾನಿಸುವ ಮೂಲಕ ಪ್ರಕರಣ ಬಹಿರಂಗಗೊಂಡತಾಗಿದೆ.
'ಮಹಿಳೆಯ ಕೈಗಳನ್ನು ಹಿಂದಕ್ಕೆ ಕಟ್ಟಿ ಬಯಲು ಪ್ರದೇಶದಲ್ಲಿ ನಿಲ್ಲಿಸಿ ಉಗ್ರಗಾಮಿ ಗುಂಪು ಕಲ್ಲು ಹೊಡೆದು ಸಾಯಿಸುತ್ತಿರುವ ದೃಶ್ಯ' ವೀಡಿಯೋದಲ್ಲಿ ದಾಖಲಾಗಿದೆ ಎಂದು ವರದಿ ವಿವರಿಸಿದೆ. ಈ ಸಂದರ್ಭದಲ್ಲಿ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಕೂಡ ಕ್ರೂರಿ ತಾಲಿಬಾನಿಗಳು ಕಲ್ಲು ಹೊಡೆದು ಹತ್ಯೆಗೈದಿರುವುದಾಗಿ ಡೈಲಿ ಮೇಲ್ ವರದಿ ತಿಳಿಸಿದೆ.
ಮಹಿಳೆಯೊಬ್ಬಳು ಪರ ಪುರುಷನ ಜೊತೆ ಇದ್ದಿರುವುದು ಕಂಡು ಬಂದಿದ್ದಕ್ಕೆ ಈ ಶಿಕ್ಷೆ ವಿಧಿಸಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. ಇರಾನ್ ಮತ್ತು ಸೌದಿ ಅರೇಬಿಯಾದಲ್ಲಿ ಇಂತಹ ಅಪರಾಧ ನಡೆಸಿದವರನ್ನು ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ಜಾರಿಯಲ್ಲಿದೆ. ಇದೀಗ ಅಫ್ಘಾನ್-ಪಾಕಿಸ್ತಾನ ಗಡಿಭಾಗದಲ್ಲಿ ಪ್ರಾಬಲ್ಯ ಹೊಂದಿರುವ ತಾಲಿಬಾನ್ ಪ್ರದೇಶದಲ್ಲಿ ಅಕ್ರಮ ಸಂಬಂಧ, ಪ್ರೇಮಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಚಾಳಿಯನ್ನು ಮುಂದುವರಿಸಿದೆ.