ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಿಲಿಟರಿ, ಕೋರ್ಟ್ ಟೀಕಿಸಿದ ಪಾಕಿಸ್ತಾನಿ ಸಚಿವ ವಜಾ (Pakistani minister | Supreme Court | Pakistan | Abdul Qayyum Jatoi)
Bookmark and Share Feedback Print
 
ಸಶಸ್ತ್ರ ಪಡೆಗಳು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಪಾಕಿಸ್ತಾನದ ರಕ್ಷಣಾ ಸಾಮಗ್ರಿ ಉತ್ಪಾದನಾ ಸಚಿವ ಅಬ್ದುಲ್ ಖಯಮ್ ಜತೋಯಿ ಅವರನ್ನು ವಜಾಗೊಳಿಸಲಾಗಿದೆ.

ಗಡಿ ಪ್ರದೇಶದಲ್ಲಿ ಹೋರಾಡಲು ಮಿಲಿಟರಿಯನ್ನು ಬಳಸಬೇಕೇ ಹೊರತು ನವಾಬ್ ಅಕ್ಬರ್ ಭುಗ್ತಿ, ಜುಲ್ಫೀಕರ್ ಆಲಿ ಭುಟ್ಟೋ ಮತ್ತು ಬೆನಜೀರ್ ಭುಟ್ಟೋ ಅವರಂತಹ ನಾಯಕರನ್ನು ಕೊಲ್ಲಲು ಅಲ್ಲ ಎಂದು ಭುಗ್ತಿಯವರ ಪುತ್ರ ತಲಾಲ್ ಅಕ್ಬರ್ ಭುಗ್ತಿಯವರಿಗೆ ಸಂತಾಪ ಸೂಚಿಸುತ್ತಾ ಜತೋಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಜತೋಯಿಯವರು ನೀಡಿದ ಹೇಳಿಕೆಗೆ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಸ್ವತಃ ಆಡಳಿತ ಪಕ್ಷ ಪಿಪಿಪಿ ಕೂಡ ಸಚಿವರನ್ನು ಬೆಂಬಲಿಸಿರಲಿಲ್ಲ. ಇದು ಸಚಿವರ ವೈಯಕ್ತಿಕ ಹೇಳಿಕೆಯಾಗಿದ್ದು, ಸರಕಾರದ ದೃಷ್ಟಿಕೋನವಲ್ಲ ಎಂದು ಮಾಹಿತಿ ಸಚಿವ ಖಾಮರ್ ಜಮಾನ್ ಕೈರಾ ಹೇಳಿದ್ದರು.

ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಇಸ್ಲಾಮಾಬಾದ್‌ಗೆ ಕರೆಸಿಕೊಂಡ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ, ಸಚಿವರ ಉತ್ತರದಿಂದ ಸಮಾಧಾನಗೊಂಡಿರಲಿಲ್ಲ. ಜತೋಯಿಯವರು ನೀಡಿದ ಸಮರ್ಥನೆಗಳು ಸ್ವೀಕಾರಾರ್ಹವಲ್ಲವಾಗಿರುವುದರಿಂದ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ನಿರ್ಗಮಿಸುವಂತೆ ಸೂಚಿಸಿದರು ಎಂದು ವರದಿಗಳು ಹೇಳಿವೆ.

2006ರ ಆಗಸ್ಟ್ ತಿಂಗಳಲ್ಲಿ ಬಲೂಚಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಅಕ್ಬರ್ ಭುಗ್ತಿಯವರು ಬಲಿಯಾಗಿದ್ದರು. ಬುಡಕಟ್ಟು ಪ್ರಭಾವಿ ನಾಯಕರಾಗಿದ್ದ ಅವರು ಕೇಂದ್ರ ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದರು ಎಂಬ ಆರೋಪಗಳಿದ್ದವು. ಅಲ್ಲದೆ ಅವರನ್ನು ಕೊಲ್ಲಿಸಿದ್ದು ಆಗಿನ ಅಧ್ಯಕ್ಷ ಫರ್ವೇಜ್ ಮುಶರಫ್ ಎಂದು ಹೇಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ