ನ್ಯಾಟೋ ಮಿಲಿಟರಿ ಪಡೆಯ ಹೆಲಿಕಾಪ್ಟರ್ ದಾಳಿಗೆ ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಸುಮಾರು 50 ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ದಕ್ಷಿಣ ಕಂದಾಹಾರ್ ಪ್ರದೇಶದಲ್ಲಿನ ತಾಲಿಬಾನ್ ಉಗ್ರರನ್ನು ಗುರಿಯಾಗಿರಿಸಿ ಅಂತಾರಾಷ್ಟ್ರೀಯ ಪಡೆಗಳು ನಡೆಸಿದ ಹೆಲಿಕಾಪ್ಟರ್ ದಾಳಿಯಲ್ಲಿ ಹಲವು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಅಫ್ಘಾನ್ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ತಾಲಿಬಾನ್ ಉಗ್ರರನ್ನು ಸದೆಬಡಿಯುವಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಮುಂದಾಗಿವೆ.
ಗಡಿಭಾಗದಲ್ಲಿ ಅಫ್ಘಾನ್ ಭದ್ರತಾ ಪಡೆಯ ಔಟ್‌ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ನ್ಯಾಟೋ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಅಲ್ಲದೇ ಈ ದಾಳಿಯನ್ನು ನ್ಯಾಟೋ ಸಮರ್ಥಿಸಿಕೊಂಡಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿ ತುಂಬಾ ಸೂಕ್ಷ್ಮವಾಗಿದೆ ಎಂದು ನ್ಯಾಟೋ ವಕ್ತಾರ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಉಗ್ರರನ್ನು ಮಟ್ಟಹಾಕುವುದೇ ತಮ್ಮ ಮುಖ್ಯ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.