ಇಸ್ಲಾಮಾಬಾದ್, ಮಂಗಳವಾರ, 28 ಸೆಪ್ಟೆಂಬರ್ 2010( 13:23 IST )
ನೆರೆ ಪರಿಹಾರಕ್ಕೆ ಪಾಕಿಸ್ತಾನ ಸರಕಾರ ಸುಮಾರು 43 ಬಿಲಿಯನ್ ಡಾಲರ್‌ನಷ್ಟು ಆರ್ಥಿಕ ಹೊಡೆತವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹಾಗೂ 25 ಮಂದಿ ಕ್ಯಾಬಿನೆಟ್ ಸಚಿವರು ಕಳೆದ ಐದು ವರ್ಷಗಳಿಂದ ಆದಾಯ ತೆರಿಗೆಯನ್ನೂ ಪಾವತಿಲ್ಲ ಎಂದು ಪತ್ರಿಕೆಯೊಂದರ ವರದಿ ಬಹಿರಂಗಗೊಳಿಸಿದೆ.
ಪಾಕ್ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿಹೋಗಿದೆ. ಆ ನಿಟ್ಟಿನಲ್ಲಿ ನೆರೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿ ಕೊಡಲು ಸರಕಾರಕ್ಕೆ 43 ಬಿಲಿಯನ್ ಡಾಲರ್‌ನಷ್ಟು ಆರ್ಥಿಕ ನೆರವಿನ ಅಗತ್ಯವಿದೆ. ಅದಕ್ಕಾಗಿ ಪಾಕ್ ಸರಕಾರ ದಾನಿಗಳ ನೆರವಿಗಾಗಿಯೂ ಎದುರು ನೋಡುತ್ತಿದೆ.
ಇಷ್ಟೆಲ್ಲಾ ಗೊಂದಲಗಳ ಪರಿಸ್ಥಿತಿಯಲ್ಲಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹಾಗೂ 25 ಮಂದಿ ಸಚಿವರು ಈವರೆಗೂ ತಮ್ಮ ಆದಾಯವನ್ನು ಘೋಷಿಸಿಲ್ಲ, ಆದಾಯ ತೆರಿಗೆಯನ್ನೂ ಕಟ್ಟಿಲ್ಲ. ಹಾಗಾಗಿ ಸಚಿವರು ಮತ್ತು ಪ್ರಧಾನಿ ಕೂಡಲೇ ತಮ್ಮ ಆಸ್ತಿ ವಿವರವನ್ನು ಘೋಷಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.