ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ವಿರುದ್ಧ ಪಾಕ್‌ನಿಂದ್ಲೇ ಉಗ್ರರಿಗೆ ತರಬೇತಿ!:ಮುಷ್ ಸ್ಫೋಟಕ ಹೇಳಿಕೆ (Pakistan | India | Pervez Musharraf | militant groups | Kashmir,)
ಭಾರತದ ವಿರುದ್ಧ ಪಾಕ್‌ನಿಂದ್ಲೇ ಉಗ್ರರಿಗೆ ತರಬೇತಿ!:ಮುಷ್ ಸ್ಫೋಟಕ ಹೇಳಿಕೆ
ವಾಷಿಂಗ್ಟನ್, ಮಂಗಳವಾರ, 5 ಅಕ್ಟೋಬರ್ 2010( 16:41 IST )
PTI
'ಹೌದು...ಭಾರತದ ವಿರುದ್ಧ ಹೋರಾಡಲು ನಾವು ಭಯೋತ್ಪಾದಕ ಸಂಘಟನೆಗಳಿಗೆ ರಹಸ್ಯವಾಗಿ ತರಬೇತಿ ನೀಡಿದ್ದೇವೆ' ಎಂದು ಮೊತ್ತ ಮೊದಲ ಬಾರಿಗೆ ಪಾಕಿಸ್ತಾನ ಮಿಲಿಟರಿ ಮಾಜಿ ವರಿಷ್ಠ ಪರ್ವೆಜ್ ಮುಷರ್ರಫ್ ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಆಘಾತವನ್ನುಂಟು ಮಾಡಿದ್ದಾರೆ.
ತಾನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ಲಂಡನ್‌ನಲ್ಲಿ ಘೋಷಿಸಿದ ಬೆನ್ನಲ್ಲೇ ಮುಷ್ ಈ ಹೇಳಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನದಿಂದ ಸ್ವಯಂ ಆಗಿ ಗಡಿಪಾರುಗೊಂಡಿರುವ ಮುಷರ್ರಫ್ ಇದೀಗ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಾಕಿಸ್ತಾನ ಭಾರತದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿರುವುದು ನಿಜ ಎಂದು ಒಪ್ಪಿಕೊಳ್ಳುವ ಮೂಲಕ ಮುಷ್ ಜರ್ಮನಿಯ ಡೆರ್ ಸ್ಪೈಗೆಲ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಬಯಲುಗೊಳಿಸಿದ್ದಾರೆ. ಉಗ್ರರನ್ನು ತಾವು ಪೋಷಿಸುತ್ತಿಲ್ಲ, ತರಬೇತಿ ನೀಡಿಲ್ಲ ಎಂದೆಲ್ಲ ಈವರೆಗೂ ಪಾಕಿಸ್ತಾನ ಸಬೂಬು ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಮುಷರ್ರಫ್ ಸ್ವತಃ ಉಗ್ರರಿಗೆ ತರಬೇತಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಲ್ಲದೆ, ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಯಾಕಾಗಿ ಭಯೋತ್ಪಾದನೆ ತರಬೇತಿ ನೀಡುತ್ತಿದೆ ಎಂಬ ಪ್ರಶ್ನೆಗೆ, ನವಾಜ್ ಶರೀಫ್ ಅವರ ಅಸಡ್ಡೆ ಭಾವನೆಯಿಂದಾಗಿ ಕಾಶ್ಮೀರ ದೊಡ್ಡ ವಿವಾದವಾಗಿ ಬೆಳೆಯುವಂತಾಯಿತು. ಅಲ್ಲದೆ ಕಾಶ್ಮೀರ ಸಮಸ್ಯೆ ಬಗ್ಗೆ ನವಾಜ್ ಅಂಧ ದೃಷ್ಟಿಕೋನ ಹೊಂದಿದ್ದರು ಎಂದು ಮುಷ್ ಆರೋಪಿಸಿದ್ದಾರೆ. ಸಂದರ್ಶನದುದ್ದಕ್ಕೂ ಮುಷರ್ರಫ್ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಧಾಟಿಯಲ್ಲಿ ಮಾತನಾಡಿದ್ದು, ಭಾರತದ ವಿರುದ್ಧ ಪರೋಕ್ಷವಾಗಿ ಆಕ್ರೋಶವನ್ನು ಹೊರಹಾಕಿದ್ದರು.
ಅಷ್ಟೇ ಅಲ್ಲ ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಲ್ಲಿ ಭಾರತ ಕೂಡ ಮುಂದಾಗಿಲ್ಲ ಎಂದು ಆರೋಪಿಸಿದರು. ನವಾಜ್ ಆಡಳಿತದ ಸರಕಾರಕ್ಕೂ ಅದು ಬೇಕಾಗಿರಲಿಲ್ಲವಾಗಿತ್ತು. ಹಾಗಾಗಿ ಪಾಕ್ ಉಗ್ರರಿಗೆ ತರಬೇತಿ ನೀಡುವ ಕೆಲಸಕ್ಕೆ ಮುಂದಾಗಿತ್ತು ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮುದಾಯವಾಗಲಿ ಅಥವಾ ಪಾಶ್ಚಾತ್ಯ ದೇಶಗಳು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಧೋರಣೆ ತಳೆದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಶ್ಮೀರ ವಿವಾದ ಪಾಕಿಸ್ತಾನಕ್ಕೆ ಪ್ರಮುಖವಾದದ್ದು. ನಿಜಕ್ಕೂ ಅಮೆರಿಕ, ಜರ್ಮನಿ ಸೇರಿದಂತೆ ಪ್ರಮುಖ ಪಾಶ್ಚಾತ್ಯ ದೇಶಗಳು ಕಾಶ್ಮೀರ ವಿವಾದವನ್ನು ಬಗೆಹರಿಸುತ್ತವೆ ಎಂಬ ನಿರೀಕ್ಷೆ ನಮ್ಮದಾಗಿದೆ. ಹಾಗಿದ್ದರೆ ಜರ್ಮನಿ ವಿವಾದವನ್ನು ಬಗೆಹರಿಸುತ್ತದೆಯೇ ಎಂದು ಮುಷ್ ಖಾರವಾಗಿ ಪ್ರಶ್ನಿಸಿದ್ದಾರೆ.