ಮೆಲ್ಬೊರ್ನ್: ಮಕ್ಕಳನ್ನು ಕೊಂದ ಅಪ್ಪನಿಗೆ ಜೀವಾವಧಿ ಶಿಕ್ಷೆ
ಮೆಲ್ಬೊರ್ನ್, ಶುಕ್ರವಾರ, 15 ಅಕ್ಟೋಬರ್ 2010( 15:03 IST )
ಮಾಜಿ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಫಾದರ್ಸ್ ಡೇ ದಿನದಂದು ತನ್ನ ಮೂವರು ಮಕ್ಕಳನ್ನು ಕೊಳದಲ್ಲಿ ಮುಳುಗಿಸಿ ಸಾಯಿಸಿದ ತಂದೆಗೆ ಆಸ್ಟ್ರೇಲಿಯ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಕ್ಟೋರಿಯಾ ಸ್ಟೇಟ್ ಸುಪ್ರೀಂಕೋರ್ಟ್ ನ್ಯಾಯಾಧೀಶ ಲೆಕ್ಸ್ ಲಾಸ್ರೈ ಅವರು, ಆರೋಪಿ ರೋಬರ್ಟ್ ಫಾರೂಕ್‌ಹಾರ್ಸನ್(41)ಗೆ ಕನಿಷ್ಠ 33 ವರ್ಷಗಲ ಕಾಲ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದರು.
2005ರ ಸೆಪ್ಟೆಂಬರ್ ತಿಂಗಳಿನಲ್ಲಿ ಫಾರೂಕ್‌ಹಾರ್ಸನ್ ತನ್ನ ಮಾಜಿ ಪತ್ನಿಯಿಂದ ಮೂರು ಮಕ್ಕಳಾದ ಜೈ(10ವ), ಟೈಲೆರ್(7) ಹಾಗೂ ಎರಡು ವರ್ಷದ ಬೈಲೆಯನ್ನು ಕಾರಿನಲ್ಲಿ ಕರೆದುಕೊಂಡು ಕೊಳದತ್ತ ಕೊಂಡೊಯ್ದು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದ. ಆದರೆ ತಾನು ತನ್ನ ಮಕ್ಕಳನ್ನು ಹತ್ಯೆಗೈದಿಲ್ಲ ಎಂಬುದಾಗಿ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದ.
ಆದರೆ ಪ್ರಕರಣದ ಕುರಿತು ವಾದ ಮಂಡಿಸಿದ್ದ ಆಂಡ್ರ್ಯೂ ಟಿನ್ನೈ, ಫಾರೂಕ್‌ಹಾರ್ಸನ್ ತನ್ನ ಮಕ್ಕಳನ್ನು ನಿರ್ದಯವಾಗಿ ಕೊಂದಿದ್ದ. ಇದನ್ನು ತನ್ನ ಮಾಜಿ ಪತ್ನಿ ವಿರುದ್ಧ ಸೇಡುತೀರಿಸಿಕೊಳ್ಳಲು ಈ ರೀತಿ ಮಾಡಿದ್ದ. ಹಾಗಾಗಿ ಈತನಿಗೆ ಯಾವುದೇ ಕ್ಷಮಾದಾನ ನೀಡದೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ತಿಳಿಸಿದ್ದರು. ವಾದ-ವಿವಾದ ಆಲಿಸಿದ ನಂತರ ನ್ಯಾಯಾಲಯ ಫಾರೂಕ್‌ಹಾರ್ಸನ್ ಅನ್ನು ದೋಷಿ ಎಂದು ತೀರ್ಪು ನೀಡಿ,ಜೀವಾವಧಿ ಶಿಕ್ಷೆ ನೀಡಿತ್ತು.