ನೈಜೀರಿಯಾದ ಎಕ್ಸೋನ್ ಮೊಬಿಲ್ ನೇತೃತ್ವದ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಶಿಕ್ಷಕಿಯನ್ನು ಶಸ್ತ್ರಧಾರಿ ಗುಂಪೊಂದು ಅಪಹರಿಸಿದ್ದು, ಈ ಸಂದರ್ಭದಲ್ಲಿ ಆಕೆಯ ವಾಹನ ಚಾಲಕ, ಪೊಲೀಸ್ ಅಧಿಕಾರಿಯನ್ನು ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮಹಿಳೆಯನ್ನು ಶಸ್ತ್ರಧಾರಿ ವ್ಯಕ್ತಿಗಳು ಅಪಹರಿಸಿರುವುದಾಗಿ ಅಕ್ವಾ ಇಬೋಮ್ ಸ್ಟೇಟ್ ಪೊಲೀಸ್ ವಕ್ತಾರ ಓನೆಕಾ ಓರ್ಜಿ ತಿಳಿಸಿದ್ದು, ಈ ಸಂದರ್ಭದಲ್ಲಿ ಆಕೆಯ ವಾಹನ ಚಾಲಕ, ಪೊಲೀಸ್ ಅಧಿಕಾರಿಯನ್ನು ಗುಂಡು ಹೊಡೆದು ಸಾಯಿಸಲಾಗಿದೆ ಎಂದು ವಿವರಿಸಿದ್ದಾರೆ.
ನೈಜೀರಿಯಾದ ತೈಲ ಉತ್ಪಾದನಾ ಪ್ರದೇಶವಾದ ಎಕೆಟ್ನಲ್ಲಿ ಈ ಘಟನೆ ಬುಧವಾರ ನಡೆದಿದೆ. ಆದರೆ ಆಕೆಯನ್ನು ಯಾವ ಕಾರಣಕ್ಕಾಗಿ ಅಪಹರಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತೀಯ ಮಹಿಳೆ ಎಕೆಟ್ನ ಪಿಗಾಸುಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದರು ಎಂದು ಓರ್ಜಿ ತಿಳಿಸಿದ್ದಾರೆ. ಕಳೆದ ತಿಂಗಳಷ್ಟೇ ಶಸ್ತ್ರಧಾರಿ ವ್ಯಕ್ತಿಯೊಬ್ಬ 15 ವಿದ್ಯಾರ್ಥಿಗಳನ್ನೊಳಗೊಂಡ ಶಾಲಾ ಬಸ್ವೊಂದನ್ನು ಅಪಹರಿಸಿದ್ದ. ನಂತರ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಸತತ ಐದು ದಿನಗಳ ಕಾರ್ಯಾಚರಣೆ ನಡೆಸಿದ ನಂತರ ಮಕ್ಕಳನ್ನು ಅಪಹರಣಕಾರನಿಂದ ಸುರಕ್ಷಿತ ಬಿಡುಗಡೆಗೊಳಿಸಿದ್ದರು.