ಇದೊಂದು ವಿಚಿತ್ರ ಮದುವೆ. ಮೊದಲು ನಡೆಯುತ್ತಿದ್ದುದು ಗಂಡು-ಹೆಣ್ಣಿನ ನಡುವೆ ಮದುವೆ. ಕಾಲ ಬದಲಾಗುತ್ತಾ ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯೂ ಸಾಮಾನ್ಯವಾಗುತ್ತಿದೆ. ಅದಕ್ಕೀಗ ಹೊಸ ಸೇರ್ಪಡೆ ತನ್ನನ್ನೇ ತಾನು ಮದುವೆಯಾಗುವುದು. ಇಲ್ಲಿ ವರ-ವಧು ಎಲ್ಲವೂ ತಾನೇ ಸ್ವತಃ ಹೊರತು ಬೇರೆಯವರಲ್ಲ.
ಹೌದು, ಇಂತಹ ಯೋಚನೆ ಬಂದಿರುವುದು ತೈವಾನ್‌ನ ಚೆನ್ ವೈ-ಯೈಹ್ ಎಂಬ 30ರ ಸುಂದರ ತರುಣಿಗೆ. ಆಕೆ ಮಾಡುತ್ತಿರುವುದು ತಮಾಷೆಯಲ್ಲ, ಯಾಕೆಂದರೆ ತನ್ನ ಮದುವೆಯಾಗಿ ಭರ್ಜರಿ ತಯಾರಿಯನ್ನೇ ನಡೆಸಿದ್ದಾಳೆ. ಚೆಂದದ ಬಿಳಿ ಬಟ್ಟೆಯನ್ನು ತೊಟ್ಟ ಸುಂದರ ಭಾವಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ.
PR
ಮದುವೆಯ ಯೋಜನೆಯೂ ಸಿದ್ಧವಾಗಿದೆ. ಈಗಾಗಲೇ ಕಲ್ಯಾಣ ಮಂಟಪವೊಂದನ್ನು ಕಾಯ್ದಿರಿಸಿದ್ದಾಳೆ. ಕೇವಲ 30 ಆಪ್ತರ ನಡುವೆ ಸಮಾರಂಭ ನಡೆಯಲಿದೆ. ಅಂದು ನನ್ನನ್ನೇ ನಾನು ಮದುವೆ ಮಾಡಿಕೊಳ್ಳಲಿದ್ದೇನೆ ಎಂದು ಚೆನ್ ಹೇಳಿದ್ದಾಳೆ.
ಪುರುಷರತ್ತ ಆಕರ್ಷಿತಳಾಗದ ತೈಪೈಯಲ್ಲಿ ಕಚೇರಿಯೊಂದರಲ್ಲಿ ಉದ್ಯೋಗಿಯಾಗಿರುವ ಚೆನ್, ಮದುವೆಯಾಗಲೇಬೇಕೆಂಬ ಸಾಮಾಜಿಕ ಒತ್ತಡವನ್ನು ಎದುರಿಸುತ್ತಿದ್ದಳು. ಹಾಗಾಗಿ ಮದುವೆಯ ತೀರ್ಮಾನಕ್ಕೆ ಬಂದಿದ್ದಾಳೆ.
30ರ ಹರೆಯ ಎನ್ನುವುದು ನನಗೆ ಪ್ರಮುಖ ಘಟ್ಟ. ನನ್ನ ಕೆಲಸ ಮತ್ತು ಅನುಭವ ಎರಡೂ ಅತ್ಯುತ್ತಮವಾಗಿವೆ. ಆದರೆ ನನಗೆ ಸೂಕ್ತವಾದ ಸಂಗಾತಿಯನ್ನು ಹುಡುಕುವುದು ಸಾಧ್ಯವಾಗಲಿಲ್ಲ. ಏನು ಮಾಡುವುದು? ಹಾಗೆಂದು ನಾನು ಮದುವೆಯ ವಿರೋಧಿಯಲ್ಲ. ನಮ್ಮ ಸಂಪ್ರದಾಯದ ಪರಿಧಿಯೊಳಗೆ ಭಿನ್ನ ಪದ್ಧತಿಯೊಂದನ್ನು ನಾನು ಪ್ರಚುರಪಡಿಸುತ್ತಿದ್ದೇನೆ ಎಂಬುದು ನನ್ನ ನಂಬಿಕೆ ಎಂದು ಚೆನ್ ವಿವರಣೆ ನೀಡಿದ್ದಾಳೆ.
ಚೆನ್‌ಳ 5,675 ಅಮೆರಿಕನ್ ಡಾಲರ್ ವೆಚ್ಚದ ಮದುವೆಯು ಇಂಟರ್ನೆಟ್ಟಿನಲ್ಲಿ ಭಾರೀ ಪ್ರಚಾರ ಪಡೆಯುತ್ತಿದೆ. ಸುಮಾರು 1,800ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಕೆ ಸ್ವೀಕರಿಸಿದ್ದಾಳೆ. 'ನನ್ನ ಪ್ರಕಾರ ಇಂತಹ ಹಲವು ಹುಡುಗಿಯರು ಇರಬಹುದು' ಎಂದು ದಿವಾಗರ್ಲ್ ಎಂಬ ಹೆಸರಿನಲ್ಲಿ ಒಬ್ಬಾಕೆ ಕಾಮೆಂಟ್ ಮಾಡಿದ್ದಾಳೆ.
ಜನ ತಮ್ಮನ್ನು ತಾವು ಪ್ರೀತಿಸುವುದನ್ನು ಹೆಚ್ಚು ಮಾಡುತ್ತಾರೆ ಎಂಬ ನಂಬಿಕೆ ನನ್ನಲ್ಲಿದೆ. ಮದುವೆಯ ನಂತರ ನಾನು ಮಧುಚಂದ್ರಕ್ಕೆ ಆಸ್ಟ್ರೇಲಿಯಾಕ್ಕೆ ಹೋಗಲಿದ್ದೇನೆ. ನನ್ನ ತಾಯಿ ಮೊದಲು ವರನೊಬ್ಬನನ್ನು ಮದುವೆಯಾಗುವಂತೆ ಹೇಳಿದ್ದರು. ಆದರೆ ನಂತರ ನನ್ನ ಏಕವ್ಯಕ್ತಿ ಮದುವೆಗೆ ಬೆಂಬಲ ವ್ಯಕ್ತಪಡಿಸಿದರು ಎಂದು ಚೆನ್ ಹೇಳಿಕೊಂಡಿದ್ದಾಳೆ.
ಆದರೆ ಈ ಮದುವೆಯನ್ನು ಅಧಿಕೃತವಾಗಿ ನೋಂದಣಿ ಮಾಡುವುದಿಲ್ಲವಂತೆ. ಮುಂದಿನ ದಿನಗಳಲ್ಲಿ ಆಕೆಗೆ ಹೊಂದಿಕೆಯಾಗುವ ಪುರುಷನೇನಾದರೂ ಸಿಕ್ಕಿದಲ್ಲಿ ಮತ್ತೆ ಮದುವೆಯಾಗುತ್ತೇನೆ ಎಂದಿದ್ದಾಳೆ. ನನಗೆ ಸಮರ್ಥವಾದ ಬಾಯ್‌ಫ್ರೆಂಡ್ ಇದ್ದಿದ್ದರೆ ನಾನು ಹೀಗೆ ಮಾಡುತ್ತಿದ್ದೆನೇ ಎಂದೂ ಪ್ರಶ್ನಿಸಿದ್ದಾಳೆ.