ಇಸ್ಲಾಮಾಬಾದ್, ಸೋಮವಾರ, 25 ಅಕ್ಟೋಬರ್ 2010( 15:25 IST )
PTI
ಪಾಕಿಸ್ತಾನದ ಮಿಲಿಟರಿ ಮಾಜಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಅವರನ್ನು ಹತ್ಯೆಗೈಯುವುದೇ ಸೂಕ್ತ ಎಂದು ಪಾಕಿಸ್ತಾನದ ಧಾರ್ಮಿಕ ಮತ್ತು ರಾಜಕೀಯ ಪಂಡಿತರು ಹೊರಡಿಸಿರುವ ಫತ್ವಾದಲ್ಲಿ ಘೋಷಿಸಿದ್ದಾರೆ.
ಶನಿವಾರ ಕ್ವೆಟ್ಟಾದಲ್ಲಿ ರಾಜಕೀಯ ಮತ್ತು ಧಾರ್ಮಿಕ ಪಂಡಿತರು ಸಭೆ ನಡೆಸಿದ ನಂತರ, ಮುಷರ್ರಫ್ ಅವರನ್ನು ಹತ್ಯೆಗೈಯುವುದು ಸೂಕ್ತ ಎಂದು ಘೋಷಿಸಿ ಫತ್ವಾ ಹೊರಡಿಸಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಮಾಜಿ ಆಡಳಿತಗಾರ ಮುಷರ್ರಫ್ ಅವರು ತಾಯ್ನಾಡಿಗೆ ವಾಪಸಾಗಲು ಸಿದ್ದತೆ ನಡೆಸುತ್ತಿರುವ ನಡುವೆಯೇ 'ವಾಜಿಬುಲ್ ಖತಲ್' (ಹತ್ಯೆಗೈಯುವುದೇ ಸೂಕ್ತ) ನಿರ್ಧಾರವನ್ನು ಕೈಗೊಳ್ಳಲಾಗಿದೆ. 2007ರಲ್ಲಿ ಲಾಲ್ ಮಸೀದಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲಿಟರಿ ಕಾರ್ಯಾಚರಣೆ ಮೂಲಕ ಬಲೂಚ್ ನ್ಯಾಷನಲಿಸ್ಟ್ ಮುಖಂಡ ನವಾಬ್ ಅಕ್ಬರ್ ಬುಕ್ತಿ ಹಾಗೂ ನವಾಬಾಜಾದ್ ಬಾಲಾಚ್ ಮಾರ್ರಿ ಹತ್ಯೆಗೆ ಪ್ರತೀಕಾರವಾಗಿ ಈ ಫತ್ವಾ ಹೊರಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಮುಷ್ ವಿರುದ್ಧ ಫತ್ವಾ ಹೊರಡಿಸಲು ನಡೆಸಿದ ಸಭೆಯನ್ನು ಜಾಮ್‌ಹೂರಿ ವಾತನ್ ಪಾರ್ಟಿ ಮತ್ತು ನವಾಬ್ ಅಕ್ಬರ್ ಪುತ್ರ ನವಾಬಾಜಾದ್ ತಲಾಲ್ ಅಕ್ಬರ್ ಬುಕ್ತಿ ಆಯೋಜಿಸಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಮಾತ್ ಉಲೇಮಾ ಇ ಇಸ್ಲಾಮ್‌ನ ಮಾಜಿ ಸಂಸದ ಮೌಲಾನಾ ನೂರ್ ಮುಹಮ್ಮದ್, ಅತಾ ಉರ್ ರೆಹಮಾನ್ ಹಾಗೂ ಮೌಲಾನಾ ಅಬ್ದುಲ್ ಖಾದ್ರಿ ಲೂನಿ ಅವರು, ಅಕ್ಬರ್ ಬುಕ್ತಿ ಮತ್ತು ವಿದ್ಯಾರ್ಥಿಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರ್ರಫ್ ಅವರನ್ನು ಪಾಕ್ ಸರಕಾರ ಇಂಟರ್‌ಪೋಲ್ ನೆರವಿನಿಂದ ವಾಪಸ್ ಕರೆಯಿಸಿಕೊಳ್ಳಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿನ ತೀವ್ರ ಒತ್ತಡದ ನಂತರ ಮುಷರ್ರಫ್ ಅವರು ಪಾಕಿಸ್ತಾನದಿಂದ ಸ್ವಯಂ ಆಗಿ ಗಡಿಪಾರುಗೊಂಡಿದ್ದು, ಈಗ ಲಂಡನ್‌ನಲ್ಲಿ ಠಿಕಾಣಿ ಹೂಡಿದ್ದಾರೆ.
ಅಷ್ಟೇ ಅಲ್ಲ ಇತ್ತೀಚೆಗಷ್ಟೇ, ಯಾರೇ ಆಗಲಿ ಪರ್ವೆಜ್ ಮುಷರ್ರಫ್ ಅವರ ತಲೆ ಕತ್ತರಿಸಿದವರಿಗೆ 1 ಬಿಲಿಯನ್ (ನೂರು ಕೋಟಿ) ರೂಪಾಯಿ ನಗದು ಹಾಗೂ ಒಂದು ಸಾವಿರ ಎಕರೆ ಜಮೀನು ಬಹುಮಾನವಾಗಿ ನೀಡಲಾಗುವುದು ಎಂದು ತಲಾಲ್ ಬುಕ್ತಿ ಘೋಷಿಸಿದ್ದರು.