ಚಂದ್ರಿಕಾ ಹತ್ಯೆ ಯತ್ನ:ಎಲ್‌ಟಿಟಿಇ ವ್ಯಕ್ತಿಗೆ 30 ವರ್ಷ ಜೈಲು
ಕೊಲಂಬೊ, ಬುಧವಾರ, 27 ಅಕ್ಟೋಬರ್ 2010( 18:13 IST )
ಶ್ರೀಲಂಕಾದ ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರಾತುಂಗಾ ಅವರನ್ನು ಹತ್ಯೆಗೈಯಲು ಸಂಚು ಹಾಗೂ ಹತ್ಯಾ ಯತ್ನದ ಆರೋಪದ ಮೇಲೆ ಎಲ್‌ಟಿಟಿಇ ಸದಸ್ಯನೊಬ್ಬನಿಗೆ ಶ್ರೀಲಂಕಾ ಕೋರ್ಟ್ ಬುಧವಾರ 30 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
1999ರ ಡಿಸೆಂಬರ್ ತಿಂಗಳಿನಲ್ಲಿ ಕೊಲಂಬೊ ಟೌನ್ ಹಾಲ್ ಆವರಣದಲ್ಲಿ ಚಂದ್ರಿಕಾ ಕುಮಾರಾತುಂಗಾ ಅವರು ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಬಾಂಬ್ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್ ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಚಂದ್ರಿಕಾ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವಂತಾಗಿತ್ತು.
ಬಾಂಬ್ ಸ್ಫೋಟದಲ್ಲಿ 26 ಮಂದಿ ಸಾವನ್ನಪ್ಪಿದ್ದು, ಸುಮಾರು 80ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ್ದ ಕೊಲಂಬೊ ಹೈಕೋರ್ಟ್ ನ್ಯಾಯಾಧೀಶ ಡಬ್ಲ್ಯುಟಿಎಂಪಿಡಿ ವಾರಾವೆವಾ ಅವರು ಆರೋಪಿ ಪಾಚಾಚಾವೆಲ್ ಇಳಗೇಶ್ವರಂಗೆ 30 ವರ್ಷಗಳ ಜೈಲುಶಿಕ್ಷೆಯ ತೀರ್ಪು ನೀಡಿದ್ದಾರೆ.
ವಿಚಾರಣೆಯ ಆರಂಭದಲ್ಲಿ ತಾನು ಆಪರಾಧಿ ಅಲ್ಲ ಎಂದೇ ವಾದಿಸಿದ್ದ ಇಳಗೇಶ್ವರಂ, ನಂತರ ತಾನು ಆರೋಪಿ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದ.