ಹಿಂದೂ ಮತ್ತು ಕ್ರಿಶ್ಚಿಯನ್‌ರ ನಡುವೆ ಒಗ್ಗಟ್ಟು ಅಗತ್ಯ: ವ್ಯಾಟಿಕನ್
ವ್ಯಾಟಿಕನ್ ಸಿಟಿ, ಶುಕ್ರವಾರ, 29 ಅಕ್ಟೋಬರ್ 2010( 12:44 IST )
ಧಾರ್ಮಿಕ ನಾಯಕರು ಪರಸ್ಪರ ಮಾತುಕತೆ ನಡೆಸಿ, ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಹಿಂದೂಗಳ ಪವಿತ್ರ ಹಬ್ಬವಾಗಿರುವ ದೀಪಾವಳಿಯನ್ನು ಆಚರಿಸುವ ಮೂಲಕ ಹಿಂದೂ ಮತ್ತು ಕ್ರಿಶ್ಚಿಯನ್‌ರ ನಡುವೆ ಸಾಮರಸ್ಯದ ಜೀವನದೊಂದಿಗೆ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ವ್ಯಾಟಿಕನ್ ಕರೆ ನೀಡಿದೆ.
ಪ್ರಸಕ್ತ ಸಾಲಿನ ದೀಪಾವಳಿಯ ಹಿನ್ನೆಲೆಯಲ್ಲಿ ವ್ಯಾಟಿಕನ್‌ನ ಬಿಷಪ್ ಕೌನ್ಸಿಲ್‌ನ ಅಧ್ಯಕ್ಷ ಕಾರ್ಡಿನಲ್ ಜೀನ್ ಲೂಯಿಸ್ ತೌರಾನ್ ಈ ಸಂದೇಶವನ್ನು ನೀಡಿದ್ದಾರೆ.
ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯ ಸಾಮರಸ್ಯ ಹಾಗೂ ಸಹಕಾರದೊಂದಿಗೆ ನಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಿಷಪ್ ಕೌನ್ಸಿಲ್‌ನ ಕಾರ್ಯದರ್ಶಿ ಅರ್ಚ್ ಬಿಷಪ್ ಪಿಯರ್ ಲುಯಿಗಿ ಸೆಲಾಟಾ ಅವರು ಕೂಡ ಸಹಿ ಹಾಕಿರುವ ಈ ಸಂದೇಶದಲ್ಲಿ ಕರೆ ನೀಡಲಾಗಿದೆ.
ಸಮಾಜದಲ್ಲಿ ಶಾಂತಿಯುತ, ಸಾಮರಸ್ಯದ ಜೀವನ ನಡೆಸಲು ಉಭಯ ಧರ್ಮಗಳ ನಡುವೆ ಹೊಂದಾಣಿಕೆ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ಪರಸ್ಪರ ಮಾತುಕತೆ ನಡೆಸಿ ವೈಮನಸ್ಸನ್ನು ದೂರಮಾಡಬೇಕು. ಹಿಂದೂಗಳ ದೀಪಾವಳಿಯ ಹಬ್ಬವನ್ನು ಆಚರಿಸುವ ಈ ಸಂದರ್ಭದಲ್ಲಿಯೂ ಕ್ರಿಶ್ಚಿಯನ್ ಸಮುದಾಯದವರು ಸಹಕಾರ ನೀಡಬೇಕು. ಅದೇ ರೀತಿ ಹಿಂದೂಗಳು ಕ್ರಿಶ್ಚಿಯನ್‌ರ ಜತೆ ಕೈಜೋಡಿಸಬೇಕು ಎಂದು ವ್ಯಾಟಿಕನ್ ಹೇಳಿದೆ.