ಭಾರತೀಯ ನಕ್ಸಲೀಯರಿಗೆ ನಾವು ತರಬೇತಿ ನೀಡಿದ್ದೇವು ಎಂಬ ಆರೋಪವನ್ನು ನೇಪಾಳ ಮಾವೋವಾದಿಗಳು ಸಾರಸಗಟಾಗಿ ತಳ್ಳಿಹಾಕಿದೆ.
ನೇಪಾಳದ ಮಾವೋವಾದಿಗಳು ನಕ್ಸಲೀಯರಿಗೆ ಸೈದ್ಧಾಂತಿಕವಾಗಿ ಹಾಗೂ ಮಿಲಿಟರಿ ತರಬೇತಿಯನ್ನು ಪಾಕಿಸ್ತಾನದ ಲಷ್ಕರ್ ಇ ತೊಯ್ಬಾದ ನೆರವಿನೊಂದಿಗೆ ತರಬೇತಿ ನೀಡುತ್ತಿದೆ ಎಂಬ ಭಾರತದ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದೆ.
ಈ ಕುರಿತು ಮಾವೋ ಪಕ್ಷದ ಉಪಾಧ್ಯಕ್ಷ ಬಾಬುರಾಮ್ ಭಾಟ್ಟಾರೈ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಜತೆ ಮಾತನಾಡುತ್ತ, ಇದೊಂದು ಅನಾವಶ್ಯಕವಾದ ಪ್ರಚೋದನಾಕಾರಿ ಪ್ರಕ್ರಿಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 25ರಂದು ಭಾರತೀಯ ರಾಯಭಾರಿ ರಾಕೇಶ್ ಸೂಡ್ ಅವರು, ನೇಪಾಳದ ನೆಲದಲ್ಲಿ ಭಾರತೀಯ ನಕ್ಸಲೀಯರಿಗೆ ತರಬೇತಿ ನೀಡುತ್ತಿರುವ ಬಗ್ಗೆ ವಿವರವಾದ ಪತ್ರವೊಂದನ್ನು ನೇಪಾಳ ಗೃಹ ಸಚಿವ ಭೀಮ್ ರಾವಲ್ ಅವರಿಗೆ ನೀಡಿದ್ದರು.
ಪೀಪಲ್ಸ್ ಲಿಬರೇಷನ್ ಆರ್ಮಿ ಹಾಗೂ ಯುಸಿಪಿಎನ್(ಎಂ)ನ ಮಿಲಿಟರಿ ವಿಂಗ್‌ನ ಮುಖಂಡರು ಒರಿಸ್ಸಾ, ಜಾರ್ಖಂಡ್, ಛತ್ತೀಸ್‌ಗಢ್ ಮತ್ತು ಬಿಹಾರದಲ್ಲಿನ ಮಾವೋವಾದಿಗಳಿಗೆ ತರಬೇತಿ ನೀಡುತ್ತಿರುವುದಾಗಿ ಪತ್ರದಲ್ಲಿ ಆರೋಪಿಸಲಾಗಿತ್ತು.
ಆದರೆ ನಾವು ಭಾರತೀಯ ಮಾವೋವಾದಿಗಳಿಗೆ ಯಾವತ್ತೂ ಯಾವುದೇ ತರಬೇತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ನಾವೇನು ಮೂರ್ಖರಲ್ಲ. ನಮ್ಮ ಮತ್ತು ಭಾರತದ ನಡುವಿನ ಬಾಂಧವ್ಯ ಹಾಳು ಮಾಡಿಕೊಳ್ಳಲು ನಾವು ಇಚ್ಛಿಸುವುದಿಲ್ಲ ಎಂದರು.