ಅಮೆರಿಕದ ಬಾಲ್ಯ ವೇಶ್ಯಾವಾಟಿಕೆ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 99 ಮಂದಿಯನ್ನು ಬಂಧಿಸಲಾಗಿದ್ದು, 69 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ದೇಶದ 30 ರಾಜ್ಯಗಳ 40 ನಗರಗಳಲ್ಲಿ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಅಧಿಕಾರಿಗಳು ಏಕಕಾಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲ್ಯ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ 99 ಮಂದಿಯನ್ನು ಸೆರೆ ಹಿಡಿದಿರುವುದಾಗಿ ಪ್ರೆನ್ಸಾ ಲಾಟಿನಾ ವರದಿ ಮಾಡಿದೆ.
ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡು ಲೈಂಗಿಕ ದಂಧೆಯನ್ನು ನಡೆಸುತ್ತಿದ್ದ ಖದೀಮರನ್ನು ಬಂಧಿಸಲಾಗಿದ್ದು, ಅಂತಹ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಫ್‌ಬಿಐ ವಕ್ತಾರ ಜಾನ್ಸನ್ ಪ್ಯಾಕ್ ತಿಳಿಸಿದ್ದಾರೆ.
ಬಾಲ್ಯ ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಲ್ಪಟ್ಟ ಮಕ್ಕಳು 12ರಿಂದ 17 ವರ್ಷದವರಾಗಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಎಷ್ಟು ಮಂದಿಯನ್ನು ರಕ್ಷಿಸಲಾಗಿದೆ, ಸೆರೆಹಿಡಿಯಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ ಎಂದು ವರದಿ ಹೇಳಿದೆ.