ಯೆಮೆನ್ ಮೂಲದ ಅಮೆರಿಕ ಸಂಜಾತ ಅಲ್ ಖಾಯಿದಾ ಸಂಪರ್ಕ ಹೊಂದಿರುವ ಅನ್ವರ್ ಅಲ್ ಅವ್ಲಾಕಿ ಜಗತ್ತಿನ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಗುಪ್ತಚರ ಇಲಾಖೆಯ ತಜ್ಞರು ನ್ಯೂಯಾರ್ಕ್ ಭಯೋತ್ಪಾದನಾ ನಿಗ್ರಹ ದಳಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಅವ್ಲಾಕಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ ಎಂದು ವರದಿ ತಿಳಿಸಿರುವುದಾಗಿ ಫೋಕ್ಸ್ ನ್ಯೂಸ್ ವಿವರಿಸಿದೆ. ಅವ್ಲಾಕಿ 9/11, 7/7 ಮತ್ತು 7/21 ದಾಳಿಯ ಸಂಚು ರೂಪಿಸುವಲ್ಲಿ ಶಾಮೀಲಾಗಿದ್ದಾನೆ ಎಂದು ವರದಿ ಆರೋಪಿಸಿದೆ.
ಅಷ್ಟೇ ಅಲ್ಲ ಅವ್ಲಾಕಿ ಮುಸ್ಲಿಮ್ ಸಮುದಾಯವನ್ನು ಪ್ರಚೋದಿಸುವ ಹೇಳಿಕೆಯನ್ನು ನೀಡುವಲ್ಲಿಯೂ ನಿಸ್ಲೀಮನಾಗಿದ್ದಾನೆ. ಆತ ಡಿವಿಡಿ, ವೆಬ್ ಪೋಸ್ಟ್ ಹಾಗೂ ಆನ್‌ಲೈನ್ ಮ್ಯಾಗಜೀನ್ ಮೂಲಕ ಉಗ್ರರ ಪರ ಲೇಖನಗಳನ್ನು ಪ್ರಕಟಿಸುತ್ತಲೇ ಇರುತ್ತಾನೆ.
ಆ ನಿಟ್ಟಿನಲ್ಲಿ ಅಲ್ ಖಾಯಿದಾ ಉಗ್ರಗಾಮಿ ಸಂಪರ್ಕ ಹೊಂದಿರುವ ಅವ್ಲಾಕಿ ಜಗತ್ತಿನ ಮೋಸ್ಟ್ ಡೇಂಜರಸ್ ವ್ಯಕ್ತಿಯಾಗಿದ್ದಾನೆ ಎಂದು ಗುಪ್ತಚರ ಇಲಾಖೆಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.