ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಈಗಲೂ ಕೂಡ ಯುರೋಪ್ ಹಾಗೂ ಅಮೆರಿಕದ ಮೇಲೆ ಮುಂಬೈ ಮಾದರಿಯಲ್ಲಿ ದಾಳಿ ನಡೆಸಲು ಸಂಚು ಹೂಡಿದೆ ಎಂದು ಯುರೋಪ್ ಮತ್ತು ಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಬ್ರಿಟನ್, ಜರ್ಮನಿ, ಅಮೆರಿಕ ಹಾಗೂ ಫ್ರಾನ್ಸ್‌ನ ಪ್ರಮುಖ ನಗರಗಳ ಮೇಲೆ ಮುಂಬೈ ಮಾದರಿ ದಾಳಿ ನಡೆಸಲು ಅಲ್ ಖಾಯಿದಾ ವ್ಯವಸ್ಥಿತ ಯೋಜನೆ ರೂಪಿಸಿದೆ. ಆ ನಿಟ್ಟಿನಲ್ಲಿ ಈ ದೇಶದ ಪ್ರಜೆಗಳು ವಿದೇಶಗಳಿಗೆ ಪ್ರಯಾಣಿಸದಂತೆ ಅಕ್ಟೋಬರ್‌ನಲ್ಲಿ ಎಚ್ಚರಿಕೆಯ ಸಂದೇಶ ನೀಡಿತ್ತು.
ಅಲ್ ಖಾಯಿದಾ ಮುಂಬೈ ಮಾದರಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಜರ್ಮನಿಯ ವಿದೇಶಾಂಗ ಗುಪ್ತಚರ ಇಲಾಖೆಯ ಮಾಜಿ ವರಿಷ್ಠ ಡಾ.ಆಗಸ್ಟ್ ಹ್ಯಾನಿಂಗ್ ಸಿಎನ್ಎನ್‌ಗೆ ತಿಳಿಸಿದ್ದಾರೆ.
ಅಲ್ ಖಾಯಿದಾ ಸಂಚು ನಡೆಸಿರುವ ಬಗ್ಗೆ ನಮಗೆ ಮಾಹಿತಿ ದೊರೆತಿತ್ತು ಎಂದು ದೇಶದ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಯಾಗಿದ್ದ ಹ್ಯಾನಿಂಗ್ ವಿವರಿಸಿದ್ದಾರೆ. ಅವರು ಕಳೆದ ವರ್ಷ ತಮ್ಮ ಸೇವೆಯಿಂದ ನಿವೃತ್ತರಾಗಿದ್ದರು.