ಇಸ್ಲಾಮಾಬಾದ್, ಗುರುವಾರ, 11 ನವೆಂಬರ್ 2010( 19:39 IST )
PTI
ಪಾಕಿಸ್ತಾನ ಕರೆನ್ಸಿಯಲ್ಲಿದ್ದ ಪಾಕ್ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ಫೋಟೋದ ಬದಲಿಗೆ ತನ್ನ ಭಾವಚಿತ್ರ ಹಾಕುವಂತೆ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರ್ರಫ್ ಅವರು ಇಚ್ಛಿಸಿದ್ದರು ಎಂದು ಪಾಕ್ ಮಾಜಿ ಪ್ರಧಾನಿ ಮಿರ್ ಜಾಫರುಲ್ಲಾ ಖಾನ್ ಜಾಮಾಲಿ ಬಹಿರಂಗಗೊಳಿಸಿದ್ದಾರೆ.
ಇತ್ತೀಚೆಗೆ ಜಿಯೋ ಟಿವಿ ಸಂದರ್ಶನ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿಯನ್ನು ಅವರು ಹೊರಹಾಕಿದ್ದಾರೆ. ಜಿನ್ನಾ ಅವರ ಫೋಟೋ ತೆಗೆದು ಹಾಕಿ ಪಾಕಿಸ್ತಾನದ ನೋಟುಗಳಲ್ಲಿ ತನ್ನ ಫೋಟೋವನ್ನು ಅಚ್ಚುಹಾಕಿಸಬೇಕೆಂದು ಒತ್ತಡ ಹೇರಿದ್ದರು. ಆದರೆ ನಾನು ಅವರ ಬೇಡಿಕೆಯನ್ನು ಸಾರಸಗಟಾಗಿ ತಳ್ಳಿಹಾಕಿದ್ದೆ ಎಂದು ಜಾಮಾಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಪಿತಾಮಹಾ ಮೊಹಮ್ಮದ್ ಅಲಿ ಜಿನ್ನಾ ಅವರ ಫೋಟೋವನ್ನು ತೆಗೆಯಲು ದೇಶದ ಜನರು ಬಯಸುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ಆದರೆ ನೋಟುಗಳಲ್ಲಿ ಜಿನ್ನಾ ಅವರ ಫೋಟೋ ತೆಗೆದು, ತಮ್ಮ ಫೋಟೋ ಹಾಕಿಕೊಳ್ಳುವಂತೆ ಮುಷರ್ರಫ್ ಅವರಿಗೆ ಯಾರು ಸಲಹೆ ನೀಡಿದ್ದಾರೋ ತನಗೆ ಗೊತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಅಷ್ಟೇ ಜಾರ್ಜ್ ಡಬ್ಲ್ಯು ಬುಷ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭ ಪಾಕಿಸ್ತಾನದ ಮಿಲಿಟರಿ ಪಡೆಯನ್ನು ಇರಾಕ್‌ಗೆ ಕಳುಹಿಸಲು ಮಾಜಿ ಸರ್ವಾಧಿಕಾರಿ ಮುಷರ್ರಫ್ ಮಾತು ಕೊಟ್ಟಿದ್ದರು ಎಂದು ತಿಳಿಸಿದ್ದಾರೆ. ಆದರೆ ತಾನು ಶ್ವೇತ ಭವನಕ್ಕೆ ಭೇಟಿ ನೀಡಿದಾಗ ಬುಷ್ ಅವರ ಜೊತೆ ಚರ್ಚಿಸಿ, ಯಾವುದೇ ಕಾರಣಕ್ಕೂ ಸಂಸತ್‌ಗೆ ಮಾಹಿತಿ ನೀಡದೆ ಪಾಕ್ ಮಿಲಿಟರಿ ಪಡೆಯನ್ನು ಇರಾಕ್‌ಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೆ ಎಂದರು.
ಈ ಮಾತುಕತೆಯ ಕೆಲವೇ ದಿನದ ನಂತರ ಇರಾಕ್‌ಗೆ ಪಾಕ್ ಮಿಲಿಟರಿ ಪಡೆ ಕಳುಹಿಸುವ ನಿಟ್ಟಿನಲ್ಲಿ ಮುಷರ್ರಫ್ ಅವರು ಪಾರ್ಲಿಮೆಂಟ್ ವಿಸರ್ಜಿಸುವ ಕಠಿಣ ನಿರ್ಧಾರ ಕೈಗೊಂಡಿದ್ದರು ಎಂದು ವಿವರಿಸಿದ್ದಾರೆ.