'ಪತ್ರಕರ್ತನನ್ನು ಕಲ್ಲು ಹೊಡೆದು ಕೊಲ್ಲಿ' ಎಂದು ಇಂಗ್ಲೆಂಡ್‌ನ ಸ್ಥಳೀಯ ಜನಪ್ರತಿನಿಧಿಯೊಬ್ಬರು ಟ್ವಿಟರ್‌ನಲ್ಲಿ ಕರೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್ ನಗರದ ಕೌನ್ಸಿಲರ್ ಗ್ರೆಥ್ ಕಾಂಪ್ಟನ್ ಅವರು ಟ್ವಿಟರ್‌ನಲ್ಲಿ ಪತ್ರಕರ್ತರನ್ನು ಕಲ್ಲು ಹೊಡೆದು ಕೊಲ್ಲಬೇಕೆಂದು ಕರೆ ನೀಡುವಂತಹ ಉದ್ರೇಕಕಾರಿ ಸಂದೇಶವನ್ನು ಪೋಸ್ಟ್ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ. ನಂತರ ಗ್ರೆಥ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ದಯವಿಟ್ಟು ಯಾರಾದರೂ ಯಾಸ್ಮಿನ್ ಅಲಿಭಾಯ್ ಬ್ರೌನ್ ಪತ್ರಕರ್ತನನ್ನು ಕಲ್ಲು ಹೊಡೆದು ಕೊಲ್ಲಿ, ಇದರಿಂದ ನಿಮಗೆ ನಿಜಕ್ಕೂ ಒಳ್ಳೆಯದಾಗಲಿದೆ ಎಂದು ಗ್ರೆಥ್ ತಮ್ಮ ಟ್ವಿಟರ್‌ನಲ್ಲಿ ಉದ್ರೇಕಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅಲಿಭಾಯ್ ಬ್ರೌನ್ ದಿ ಇಂಡಿಪೆಂಡೆಂಟ್ ಪತ್ರಿಕೆಯ ಅಂಕಣಕಾರರಾಗಿದ್ದಾರೆ. ಅವರನ್ನು ಕಲ್ಲು ಹೊಡೆದು ಸಾಯಿಸುವಂತೆ ಗ್ರೆಥ್ ಕರೆ ನೀಡಿದ್ದರು. ಇಂತಹ ಉದ್ರೇಕಕಾರಿ ಹೇಳಿಕೆ ನೀಡಿದ್ದ ಗ್ರೆಥ್ ಅವರನ್ನು ಕನ್ಸರ್ವೆಟಿವ್ ಪಕ್ಷ ಅನಿರ್ದಿಷ್ಟಾವಧಿವರೆಗೆ ಅಮಾನತು ಮಾಡಿರುವುದಾಗಿ ಹೇಳಿದೆ.
ಇದೀಗ ಟ್ವಿಟರ್‌ನಿಂದ ಆ ಸಂದೇಶವನ್ನು ತೆಗೆದು ಹಾಕಲಾಗಿದೆ. ಅಷ್ಟೇ ಅಲ್ಲ, ತಾನು ಆತುರದಿಂದಾಗಿ ಆ ರೀತಿ ಹೇಳಿಕೆಯನ್ನು ಪೋಸ್ಟ್ ಮಾಡಿರುವುದಕ್ಕೆ ಕ್ಷಮೆಯಾಚಿಸುವುದಾಗಿಯೂ ಮತ್ತೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.