ಇಸ್ಲಾಮಾಬಾದ್, ಶುಕ್ರವಾರ, 12 ನವೆಂಬರ್ 2010( 18:45 IST )
ಚೀನಾಕ್ಕೆ ಭೇಟಿ ನೀಡುವುದೆಂದರೆ ನನಗೆ ನನ್ನ ಮನೆಗೆ ಹೋದಂತೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ತನಗೆ ಚೀನಾದ ಬಗ್ಗೆ ಆಂತರಿಕ ಪ್ರೀತಿ ಇದೆ. ಅಷ್ಟೇ ಅಲ್ಲ ಚೀನಾದ ಜನರನ್ನು ಮತ್ತು ಅವರ ಸಂಸ್ಕೃತಿಯನ್ನು ತಾನು ಪ್ರೀತಿಸುವುದಾಗಿ ತಿಳಿಸಿದ್ದಾರೆ.
ಚೀನಾದ ಬಗ್ಗೆ ನನಗೆ ಆಂತರಿಕ ಪ್ರೀತಿ ಇದೆ ಎಂಬುದೇ ನನ್ನ ಅಭಿಪ್ರಾಯ. ನಾನು ಚೀನಾದ ಪ್ರತಿಯೊಂದು ಅಂಶವನ್ನು ಪ್ರೀತಿಸುತ್ತೇನೆ. ಅದರಲ್ಲಿ ಚೀನಾ ಜನರು ಮತ್ತು ಸಂಸ್ಕೃತಿಯೂ ಸೇರಿದೆ ಎಂದು ಗುರುವಾರ ಸಂಜೆ ಚೀನಾದ ಗುವಾನ್‌ಜಾಹು ನಗರದಲ್ಲಿ ನಡೆಯಲಿರುವ 16ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಪಾಕಿಸ್ತಾನ ಮತ್ತು ಚೀನಾದ ಸ್ನೇಹ ಮತ್ತಷ್ಟು ಉತ್ತಮಗೊಳ್ಳುವುದರೊಂದಿಗೆ ಮುಂದಿನ ಜನಾಂಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಭರವಸೆ ಹೊಂದಿರುವುದಾಗಿಯೂ ತಿಳಿಸಿದರು. ಅಲ್ಲದೆ, ಎರಡು ನೆರೆಯ ದೇಶಗಳ ದೀರ್ಘಕಾಲದ ಗೆಳೆತನ ಇದೇ ರೀತಿ ಮುಂದುವರಿಯಲಿದೆ ಎಂದರು.
ಚೀನಾದಲ್ಲಿ ಶುಕ್ರವಾರ ಉದ್ಘಾಟನೆಗೊಳ್ಳಲಿರುವ ಏಷ್ಯನ್ ಗೇಮ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಜರ್ದಾರಿ ಅವರು, ಚೀನಾ ಪ್ರಧಾನಿ ವೆನ್ ಜಿಯಬಾವೋ ಹಾಗೂ ಥಾಯ್ ಪ್ರಧಾನಿ ಅಭಿಜಿತ್ ವೆಜ್ಜಾಜೀವಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಎಪಿಪಿ ವರದಿ ತಿಳಿಸಿದೆ.