'ದೇವರ ಹೆಸರಲ್ಲಿ ಹಿಂಸಾಚಾರ ನಡೆಸುವುದನ್ನು' ತೀವ್ರವಾಗಿ ಖಂಡಿಸುವುದಾಗಿ ಪೋಪ್ ಬೆನೆಡಿಕ್ಟ್-16 ತಿಳಿಸಿದ್ದು, ಇಸ್ಲಾಮ್‌ನ ಧಾರ್ಮಿಕ ಸ್ವಾತಂತ್ರ್ಯವನ್ನ ಗೌರವಿಸುವಂತೆ ಅವರು ಕರೆ ನೀಡಿದ್ದಾರೆ.
ಈ ರೀತಿಯ ಹಿಂಸಾಚಾರ ಜಗತ್ತಿನಲ್ಲಿ ಕೆಲವು ಸಲ ಅಂತರ್ ಧರ್ಮೀಯ ಘರ್ಷಣೆಗೆ ಸೋಗು ಹಾಕಲು ಕಾರಣವಾಗುತ್ತದೆ ಎಂದು ಪೋಪ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಹಾಗಾಗಿ ಎಲ್ಲಾ ಧರ್ಮೀಯರು ನೈತಿಕ ಮೌಲ್ಯ ಮತ್ತು ನಾಗರಿಕ ಸಹಬಾಳ್ವೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಅಷ್ಟೇ ಅಲ್ಲ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮುದಾಯದ ನಡುವಿನ ಮಾತುಕತೆಯನ್ನ ಮುಂದುವರಿಸುವುದಾಗಿ ಹೇಳಿದರು. ಇದರಿಂದಾಗಿ ಉಭಯ ಧರ್ಮಗಳ ನಡುವೆ ಮತ್ತಷ್ಟು ಸೌಹಾರ್ದತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಅಲ್ಲದೆ, ಉಭಯ ಧರ್ಮೀಯರು ಪರಸ್ಪರ ಖಾಸಗಿ ಮತ್ತು ಸಾರ್ವಜನಿಕ ಧಾರ್ಮಿಕ ಸ್ವಾತಂತ್ರ್ಯ, ಧರ್ಮಾಚರಣೆಯನ್ನು ಗೌರವಿಸಬೇಕು ಎಂದು ಹೇಳಿದರು.