ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕೀ (65) ಅವರನ್ನು ಕೊನೆಗೂ 15 ವರ್ಷಗಳ ನಂತರ ಶನಿವಾರ ಆಡಳಿತಾರೂಢ ಮಿಲಿಟರಿ ಜುಂಟಾ ಸರಕಾರ ಗೃಹಬಂಧನದಿಂದ ಮುಕ್ತಗೊಳಿಸಿದೆ.
ಸೂ ಕೀ ಅವರ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆಯೇ ಭಾವೋದ್ವೇಗಕ್ಕೆ ಒಳಗಾದ ಸಾವಿರಾರು ಮಂದಿ ಬೆಂಬಲಿಗರು ಅವರ ಮನೆಯ ಮುಂದೆ ಜಮಾಯಿಸಿದ್ದರು. ಸೂ ಕೀ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿ ಆಕೆ ಹೊರಬಂದಾಗ ಜೈಕಾರ ಹಾಕಿದರು. ತನ್ನ ಮನೆಯ ಅಂಗಳಕ್ಕೆ ಬಂದ ಆಕೆ ಜಮಾಯಿಸಿದ್ದ ಸಾವಿರಾರು ಬೆಂಬಲಿಗರತ್ತ ಕೈಬೀಸಿ ಅಭಿನಂದಿಸಿದರು.
ನಾವೆಲ್ಲ ಮತ್ತೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ನಮ್ಮ ಗುರಿಯನ್ನು ತಲುಪಬೇಕಾಗಿದೆ ಎಂದು ನೆರೆದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೇ ತಾನು ಭಾನುವಾರ ಪಕ್ಷದ ಕಚೇರಿಯಲ್ಲಿ ಮಾತನಾಡುವುದಾಗಿ ಬೆಂಬಲಿಗರಿಗೆ ತಿಳಿಸಿದರು.
ಸುಮಾರು ಎರಡು ದಶಕಗಳ ಕಾಲ ಗೃಹ ಬಂಧನದಲ್ಲಿದ್ದು, ಇದೀಗ ಬಿಡುಗಡೆಗೊಂಡಿರುವ ಸೂ ಕೀ ಅವರು ಎಲ್ಲರಿಗೂ ಪ್ರೇರಣ ಶಕ್ತಿಯಾಗಿದ್ದಾರೆ ಎಂದು ಬ್ರಿಟಿನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಪ್ರತಿಕ್ರಿಯಿಸಿದ್ದಾರೆ.
ಸೂ ಕೀ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ಆದೇಶವನ್ನು ಜುಂಟಾ ಸರಕಾರದ ಅಧಿಕಾರಿಯೊಬ್ಬರು ಓದಿ ಹೇಳಿದರು. ಇದೀಗ ಸೂ ಕೀ ಬಂಧಮುಕ್ತಗೊಂಡಿದ್ದಾರೆ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಲಿನಲ್ಲಿದ್ದ ಸೂ ಕೀಯನ್ನು 2002ರಲ್ಲಿ ಬಿಡುಗಡೆಗೊಳಿಸಿದ ನಂತರ 2003ರಲ್ಲಿ ಮತ್ತೆ ಆಕೆಯನ್ನು ಜುಂಟಾ ಸರಕಾರ ಗೃಹಬಂಧನದಲ್ಲಿ ಇರಿಸಿತ್ತು. ಆದರೆ ನೊಬೆಲ್ ಪ್ರಶಸ್ತಿ ವಿಜೇತೆ, ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿಯನ್ನು ಗೃಹಬಂಧನದಲ್ಲಿ ಇರಿಸಿರುವ ಜುಂಟಾ ನಿರ್ಧಾರಕ್ಕೆ ಜಾಗತಿಕವಾಗಿ ಸಾಕಷ್ಟು ತೀವ್ರ ವಿರೋಧ ವ್ಯಕ್ತವಾಗಿತ್ತು.
ಆದರೆ 2010ರಲ್ಲಿ ಸುಮಾರು 20 ವರ್ಷಗಳ ನಂತರ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸೂ ಕೀ ಬಿಡುಗಡೆ ಅವಧಿಯನ್ನು ವಿಸ್ತರಿಸಿತ್ತು. ಇದೀಗ ಚುನಾವಣೆ ನಡೆದಿದ್ದು, ಜುಂಟಾ ಪರ ಪಕ್ಷವೇ ಬಹುಮತ ಸಾಧಿಸಿದೆ. ಏತನ್ಮಧ್ಯೆ ಸೂ ಕೀಯನ್ನು ಮ್ಯಾನ್ಮಾರ್ ಸರಕಾರ ಬಿಡುಗಡೆಗೊಳಿಸಿದೆ.
ಮ್ಯಾನ್ಮಾರ್ ಪ್ರಜಾಪ್ರಭುತ್ವ ಹೋರಾಟಕ್ಕಾಗಿ ಆಕೆ ಸಾಕಷ್ಟು ಬೆಲೆ ತೆತ್ತಿದ್ದಾರೆ. 1999ರಲ್ಲಿ ಆಕೆಯ ಪತಿ ಮೈಕೇಲ್ ಆರಿಸ್ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಜುಂಟಾ ಸರಕಾರ ಪತ್ನಿ ಸೂ ಕೀಯನ್ನು ಕಾಣಲು ವೀಸಾವನ್ನು ನೀಡದೆ ನಿರಾಕರಿಸಿತ್ತು. ಅಷ್ಟೇ ಅಲ್ಲ ಆಕೆ ಸುಮಾರು ಎರಡು ದಶಕಗಳಿಂದ ತನ್ನ ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕೂಡ ನೋಡಿಲ್ಲ ಎಂದು ಆಕೆಯ ಸಂಬಂಧಿ ನೈಂಗ್ ನೈಂಗ್ ವಿನ್ ತಿಳಿಸಿದ್ದಾರೆ.
ಆಕೆಯ ಕಿರಿಯ ಪುತ್ರ 33ರ ಹರೆಯದ ಕಿಮ್ ಆರಿಸ್ ಕೂಡ ಬ್ಯಾಂಕಾಕ್‌ಗೆ ಆಗಮಿಸಿದ್ದು, ಆತನಿಗಾದರು ತನ್ನ ತಾಯಿಯನ್ನು ನೋಡಲು ಜುಂಟಾ ಸರಕಾರ ಅನುಮತಿ ನೀಡುತ್ತದೆಯೇ ಎಂದು ನೋಡಬೇಕು ಎಂದು ಹೇಳಿದ್ದಾರೆ.