ಪರಮಾಣು ಶಸ್ತ್ರಾಸ್ತ್ರವನ್ನು ವರ್ಜಿಸುವಂತೆ ಕರೆ ನೀಡಿರುವ ಟಿಬೆಟಿಯನ್ ಧಾರ್ಮಿಕ ಗುರು ದಲೈ ಲಾಮಾ, ಆ ನಿಟ್ಟಿನಲ್ಲಿ ಜಗತ್ತು ಯುದ್ಧ ಮುಕ್ತವಾಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.
ಜಗತ್ತು ಪರಮಾಣು ಶಸ್ತ್ರಾಸ್ತ್ರ ತ್ಯಜಿಸುವಂತೆ ನಾವೆಲ್ಲ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಅದೇ ರೀತಿ ಪ್ರತಿ ದೇಶದವೂ ಮಿಲಿಟರಿ ಮುಕ್ತವಾಗುವಂತೆ ಮಾಡುವ ಮೂಲಕ ಜಗತ್ತು ಯುದ್ಧ ಮತ್ತು ಶಸ್ತ್ರಾಸ್ತ್ರ ಮುಕ್ತವಾಗುವಂತೆ ಮಾಡಬೇಕು ಎಂದು ಜಪಾನ್‌ನ ಹಿರೋಶಿಮಾದಲ್ಲಿ ನಡೆದ ವಾರ್ಷಿಕ ವಿಶ್ವ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.
ಅವೆಲ್ಲಕ್ಕಿಂತಲೂ ಮೊದಲಾಗಿ ನಾವು ಆಂತರಿಕ ಶಾಂತಿಯ ಸಾಧನೆ ಸಾಧಿಸಬೇಕು. ಆ ಮೂಲಕ ನಾವು ಪ್ರತಿಯೊಬ್ಬರು ಸ್ವತಂತ್ರ ಎಂಬುದನ್ನು ಮನಗಾಣಬೇಕು ಎಂದರು. ಸಮರವೇ ಅಂತಿಮ ಎಂಬ ದೃಷ್ಟಿಕೋನ ಹಳೆಯದಾಗಿದೆ. ನಿಮ್ಮ ಶತ್ರುವನ್ನು ನೀವು ಸೋಲಿಸುವುದೆಂದರೆ ಅದು ದೀರ್ಘಾವಧಿಯ ಗೆಲುವಲ್ಲ.ನಿಮ್ಮ ನೆರೆ ಹೊರೆಯವರನ್ನು ವಿನಾಶ ಮಾಡುವುದು ನಮ್ಮನ್ನು ನಾವು ನಾಶ ಮಾಡಿಕೊಂಡಂತೆ ಎಂದು ತಿಳಿಸಿದ್ದಾರೆ.
ದಲೈ ಲಾಮಾ ಅವರು ಒಂಬತ್ತು ದಿನಗಳ ಕಾಲ ಜಪಾನ್ ಪ್ರವಾಸದಲ್ಲಿದ್ದು, ಅವರು ಈ ಸಂದರ್ಭದಲ್ಲಿ ಸಹಕಾರ ಮತ್ತು ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಬೆಳೆಯಲಿದೆ ಎಂಬ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.