ಕಳೆದ ಒಂದು ವರ್ಷದ ಹಿಂದೆ ಸೋಮಾಲಿಯ ಕಡಲ್ಗಳ್ಳರು ಅಪಹರಿಸಿದ್ದ ಬ್ರಿಟನ್ ಜೋಡಿಯೊಂದನ್ನು ಒತ್ತೆ ಹಣ ಪಡೆದ ನಂತರ ಬಿಡುಗಡೆಗೊಳಿಸಿರುವುದಾಗಿ ಸೋಮಾಲಿಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬ್ರಿಟನ್‌ನ ಪೌಲ್ ಮತ್ತು ರಾಚೆಲ್ ಚಾನ್‌ಡ್ಲೆರ್ ಅವರನ್ನು 2009ರ ಅಕ್ಟೋಬರ್‌ನಲ್ಲಿ ಸಣ್ಣ ನೌಕೆಯೊಂದರಲ್ಲಿ ವಿಹಾರಕ್ಕೆ ಹೊರಟ ಸಂದರ್ಭದಲ್ಲಿ ಸೋಮಾಲಿ ಕಡಲ್ಗಳ್ಳರು ಅಪಹರಿಸಿದ್ದರು.
ಕೊನೆಗೂ ಒಂದು ವರ್ಷದ ನಂತರ ಕಡಲ್ಗಳ್ಳರ ಬೇಡಿಕೆಯ ಒತ್ತೆ ಹಣವನ್ನು ಪಾವತಿಸಿದ ನಂತರ ದಂಪತಿಗಳನ್ನು ಬಿಡುಗಡೆಗೊಳಿಸಿದ್ದರು. ಆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾನ್‌ಡ್ಲೆರ್, ನಾವು ಜೀವಂತವಾಗಿ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಕುಟುಂಬ ವರ್ಗದವರನ್ನು ಕಾಣದೆ ತುಂಬಾ ಕಂಗಾಲಾಗಿದ್ದೇವು. ಆದರೆ ಇದೀಗ ಬಿಡುಗಡೆ ನಂತರ ಖುಷಿಯಾಗಿದೆ ಎಂದರು.
ಜಗತ್ತಿನ ಎಲ್ಲಾ ಭಾಗದಲ್ಲಿಯೂ ಇರುವವರೆಲ್ಲ ಕ್ರಿಮಿನಲ್ಸ್ ಆಗಿರುವುದಿಲ್ಲ. ಆದರೂ ನಾವು ಒಂದು ವರ್ಷಗಳ ಕಾಲ ಕ್ರಿಮಿನಲ್ಸ್ ಜೊತೆ ಕಾಲ ಕಳೆದಿದ್ದೇವೆ. ಆ ಸಂದರ್ಭದಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ದಂಪತಿಗಳ ಬಿಡುಗಡೆಗಾಗಿ ಕಡಲ್ಗಳ್ಳರ ಬೇಡಿಕೆಯ ಒತ್ತೆ ಹಣವನ್ನು ಗೆಳೆಯರು ಮತ್ತು ಸಂಬಂಧಿಗಳು ಹಲವು ಸಾವಿರ ಡಾಲರ್ಸ್ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದರು. ಒತ್ತೆ ಹಣ ಪಡೆದ ನಂತರ ಕಡಲ್ಗಳ್ಳರು ದಂಪತಿಗಳನ್ನು ಶನಿವಾರ ಮಧ್ಯರಾತ್ರಿ ಸೆಂಟ್ರಲ್ ಸೋಮಾಲಿಯ ಸಮೀಪ ಬಿಡುಗಡೆಗೊಳಿಸಿದ್ದರು.