ಕಾಶ್ಮೀರ ಸಮಸ್ಯೆ ಬಗ್ಗೆ ವಿಶ್ವ ಸಂಸ್ಥೆ ನಿರ್ಲಕ್ಷ:ಪಾಕ್ ಆಕ್ಷೇಪ
ವಿಶ್ವಸಂಸ್ಥೆ, ಸೋಮವಾರ, 15 ನವೆಂಬರ್ 2010( 17:14 IST )
ಅಂತಾರಾಷ್ಟ್ರೀಯ ವಿವಾದಗಳ ಪಟ್ಟಿಯಲ್ಲಿ ಕಾಶ್ಮೀರ ಸಮಸ್ಯೆಯನ್ನು ವಿಶ್ವ ಸಂಸ್ಥೆ ಸೇರಿಸದಿರುವುದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇತ್ತೀಚೆಗೆ ನಡೆದ ವಿಶ್ವ ಸಂಸ್ಥೆ ವಾರ್ಷಿಕ ಸಾಮಾನ್ಯ ಸಭೆಯ ಚರ್ಚಾ ಕೂಟದಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನದ ಹಂಗಾಮಿ ರಾಯಭಾರಿ ಅಮ್ಜದ್ ಹುಸೈನ್ ಬಿ ಸಿಯಾಲ್, ವಿಶ್ವಸಂಸ್ಥೆಯ ಬಗೆಹರಿಸಲಾಗದ ವಿವಾದಗಳ ಪರಿಧಿಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಸೇರಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಚರ್ಚೆಯಲ್ಲಿ ಮುಂದುವರಿದು, ನಿರ್ಲಕ್ಷ್ಯಕ್ಕೊಳಗಾದ ವಿವಾದಗಳ ಪೈಕಿ ಕಾಶ್ಮೀರ ವಿವಾದವೂ ಒಂದು ಹಾಗೂ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿರುವ ಪ್ರಮುಖ ವಿವಾದಗಳ ಪೈಕಿ ತುಂಬಾ ಹಳೆಯದು ಎಂಬ ಬಗ್ಗೆ ನಮಗೆ ಅರಿವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ವಿವಾದವನ್ನು ಬಗೆಹರಿಸಬೇಕೆಂದು ಪಾಕಿಸ್ತಾನ ಕೇಳುತ್ತ ಬಂದಿದೆಯಾದರೂ, ಇದು ಉಭಯ ರಾಷ್ಟ್ರಗಳಿಗೆ ಬಿಟ್ಟ ವಿಚಾರ ಎಂದು ವಿವಾದವನ್ನು ಭಾರತ ಮುಂದುವರಿಸುತ್ತ ಬಂದಿದೆ ಎಂದು ಈ ಸಂರ್ಭದಲ್ಲಿ ಆರೋಪಿಸಿದರು.