ಇಸ್ಲಾಮಾಬಾದ್, ಗುರುವಾರ, 25 ನವೆಂಬರ್ 2010( 14:40 IST )
ಪಾಕಿಸ್ತಾನಕ್ಕೆ ಮರಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಮತ್ತೊಮ್ಮೆ ಎಚ್ಚರಿಸಿದ್ದು, ತಾನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಪಾಕಿಸ್ತಾನಕ್ಕೆ ವಾಪಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಜನರು ನನ್ನನ್ನು ಆಯ್ಕೆ ಮಾಡಿದಲ್ಲಿ ಪಾಕಿಸ್ತಾನದ ಭವಿಷ್ಯವನ್ನೇ ಬದಲಿಸುವುದಾಗಿ ಮುಷ್ ಖೈಬೆರ್ ಪಾಖ್ತುನ್‌ಖಾವಾ ಮಾನ್‌ಸೆಸ್ರಾ ನಗರದಲ್ಲಿನ ಸಾರ್ವಜನಿಕ ಸಭೆಯನ್ನು ದೂರವಾಣಿ ಮೂಲಕ ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.
ಮುಷರ್ರಫ್ ಅವರು 1999ರಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರದ ಗದ್ದುಗೆ ಏರಿ ಒಂಬತ್ತು ವರ್ಷಗಳ ಕಾಲ ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ನಂತರ 2008ರಲ್ಲಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿದ್ದರು. ಇದೀಗ ಲಂಡನ್‌ನಲ್ಲಿ ವಾಸಿಸುತ್ತಿರುವ ಮುಷರ್ರಫ್ ಅಲ್ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಪಾಕಿಸ್ತಾನಕ್ಕೆ ಹಿಂದಿರುಗಿದ ಕೂಡಲೇ ಪಾಕಿಸ್ತಾನ್ ಬಚಾವೋ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.