ಮೆಕ್ಸಿಕೊ ನಗರ, ಮಂಗಳವಾರ, 21 ಡಿಸೆಂಬರ್ 2010( 13:20 IST )
ಕಳೆದ ಏಳು ತಿಂಗಳ ಹಿಂದೆ ಅಪಹರಿಸಲ್ಪಟ್ಟಿದ್ದ ಮೆಕ್ಸಿಕೋದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ, ಹಿರಿಯ ರಾಜಕಾರಣಿ ಡಿಯಾಗೋ ಫೆರ್ನಾಂಡೆಜ್ (68) ಅವರನ್ನು ಬಂಧಮುಕ್ತಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬಿಡುಗಡೆಗೊಂಡ ಡಿಯಾಗೋ ಆರೋಗ್ಯ ಉತ್ತಮವಾಗಿದೆ. ಆದರೆ ಅವರ ದೇಹ ಕೃಶವಾಗಿದೆ. ಅವರು ಅಪಹರಣಗೊಂಡು ಆರು ತಿಂಗಳು ಆರು ದಿನ ಆಗಿದೆ ಎಂದು ವರದಿ ವಿವರಿಸಿದೆ.
ಅಪಹರಣಕಾರರಿಂದ ಬಂಧಮುಕ್ತಗೊಂಡಿರುವ ಡಿಯಾಗೋ ಫೆರ್ನಾಂಡಿಜ್ ಡೇ ಸೆವಾಲ್ಲೋಸ್ ಮನೆಗೆ ವಾಪಸ್ ಆಗಿದ್ದಾರೆ. ಫೆರ್ನಾಂಡೆಜ್ ಅವರು ಆಡಳಿತಾರೂಢ ನ್ಯಾಷನಲ್ ಆಕ್ಷನ್ ಪಾರ್ಟಿಯ(ಪಿಎಎನ್) ಹಿರಿಯ ಸದಸ್ಯರಾಗಿದ್ದಾರೆ. ಅವರು 1994ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮೇ 14ರಂದು ಸ್ಯಾನ್ ಕ್ಲೆಮೆಂಟ್ ನಗರ ಸಮೀಪದ ಲಾ ಕಾಬಾನಾ ರಾಂಚ್‌ನಲ್ಲಿ ಫೆರ್ನಾಂಡೆಜ್ ವಾಹನ ಪತ್ತೆಯಾಗಿತ್ತು. ಕಾರಿನೊಳಗೆ ರಕ್ತದ ಕಲೆಗಳು ಇರುವುದು ಕೂಡ ಕಂಡುಬಂದಿತ್ತು. ನಂತರ ಫೆರ್ನಾಂಡೆಜ್ ಅವರನ್ನು ಅಪಹರಿಸಿರುವುದಾಗಿ ಗುಂಪೊಂದು ಹೊಣೆ ಹೊತ್ತುಕೊಂಡಿತ್ತು.