ದಕ್ಷಿಣ ಜಪಾನ್‌ನಲ್ಲಿ ಬುಧವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ. ಅಲ್ಲದೇ ಸ್ಥಳೀಯ ಕರಾವಳಿ ಪ್ರದೇಶದಲ್ಲಿ ತ್ಸುನಾಮಿ ಬಡಿದಪ್ಪಳಿಸುವ ಸಾಧ್ಯತೆ ಇರುವುದಾಗಿ ಮುನ್ನೆಚ್ಚರಿಕೆ ಕೂಡ ನೀಡಿದೆ.
ಚಿಚಿ-ಶಿಮಾ ಪೂರ್ವ ಪ್ರದೇಶದಿಂದ ಸುಮಾರು 153ಕಿ.ಮೀ.ದೂರವಿರುವ ಜಪಾನ್‌ನ ಬೋನಿನ್ ದ್ವೀಪ ಪ್ರದೇಶದಲ್ಲಿ ಇಂದು ಮುಂಜಾನೆ ಈ ಪ್ರಬಲ ಭೂಕಂಪ ಸಂಭವಿಸಿದೆ.
ಆದರೆ ಘಟನೆಯಲ್ಲಿ ಸಾವು-ನೋವಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಅಷ್ಟೇ ಅಲ್ಲ ದ್ವೀಪಪ್ರದೇಶದಲ್ಲಿ ತ್ಸುನಾಮಿ ಬಡಿದಪ್ಪಳಿಸುವ ಸಾಧ್ಯತೆ ಇರುವುದಾಗಿಯೂ ಎಚ್ಚರಿಕೆ ನೀಡಿದೆ.