ಈಜಿಪ್ತ್‌ನ ಅಲೆಕ್ಸಾಂಡ್ರಿಯಾ ನಗರ ಮತ್ತು ನೈಜೇರಿಯಾದ ರಾಜಧಾನಿ ಅಬುಜಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 51 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲೆಕ್ಸಾಂಡ್ರಿಯಾ ನಗರದಲ್ಲಿ ಸಂಭವಿಸಿದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾರು ಬಾಂಬ್ ಸ್ಫೋಟಿಸಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಸೇಂಟ್ಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಮಂದಿ ನೆರೆದಿದ್ದರು.ಪ್ರಾರ್ಥನೆ ಮುಗಿಸಿ ಚರ್ಚ್‌ನಿಂದ ಹೊರಬರುವಾಗ ಸ್ಫೋಟ ಸಂಭವಿಸಿದಾಗ ಕನಿಷ್ಠ 21 ಜನರು ಬಲಿಯಾಗಿದ್ದಾರೆ ಎಂದು ಪಾದ್ರಿ ಮೆನಾ ಆಡೆಲ್ ತಿಳಿಸಿದ್ದಾರೆ.
ಘಟನೆಯ ನಂತರ ಕೋಪೋದ್ರಿಕ್ತರಾದ ಕ್ರೈಸ್ತ ಸಮುದಾಯದ ಜನರು ಹತ್ತಿರದ ಮಸೀದಿಯ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸ್ಲಾಂಗೆ ಮತಾಂತರಗೊಂಡ ಇಬ್ಬರು ಕ್ರೈಸ್ತ ಮಹಿಳೆಯರನ್ನು ಕ್ರೈಸ್ತ ಸಂಸ್ಥೆಗಳಲ್ಲಿ ಕೂಡಿಡಲಾಗಿದ್ದು, ಅವರನ್ನು ಬಿಡುಗಡೆಗೊಳಿಸದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸ್ಫೋಟಗಳನ್ನು ನಡೆಸುವುದಾಗಿ ಆಲ್ ಖಾಯಿದಾ ಇನ್ ಇರಾಕ್ ಎಂಬ ಹೆಸರಿನ ಸಂಘಟನೆ ಹೇಳಿಕೆ ನೀಡಿದೆ.