ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗುವುದಿಲ್ಲ ಎಂದು ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ಮಂಗಳವಾರ ಸ್ಪಷ್ಟಪಡಿಸಿದೆ. ಆ ರೀತಿ ಮಾಡಿದಲ್ಲಿ ದೇಶದ ಸ್ಥಿರತೆಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿದೆ.
ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್(ಪಿಎಂಎಲ್ಎನ್) ಈ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ವಿರುದ್ಧ ಅವಿಶ್ವಾಸ ಮಂಡಿಸಲು ಮುಂದಾಗುವುದರಿಂದ ದೇಶಕ್ಕೆ ತೊಂದರೆಯಾಗಲಿದೆ ಎಂದು ಪಕ್ಷದ ಅಧ್ಯಕ್ಷ ರಾಜಾ ಜಾಫರ್ ಉಲ್ ಹಕ್ ಸುದ್ದಿ ಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.
ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೈತ್ರಿಕೂಟದ ಸರಕಾರ ಅತಂತ್ರ ಸ್ಥಿತಿಗೆ ತಲುಪಿಸಿದ್ದು, ಪಿಎಂಎಲ್-ಎನ್‌ನ ಈ ನಿರ್ಧಾರದಿಂದಾಗಿ ಪಿಪಿಪಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಆಡಳಿತಾರೂಢ ಅಮೆರಿಕ ಬೆಂಬಲಿತ ಪಿಪಿಪಿ ಮೈತ್ರಿಕೂಟ ಸರಕಾರ ಆರ್ಥಿಕತೆ, ಬಡತನ ಮತ್ತು ಭಯೋತ್ಪಾದನೆ ವಿರುದ್ಧ ಇನ್ನೂ ಕಠಿಣ ರೀತಿಯಲ್ಲಿ ಹೋರಾಡಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಪಿಎಂಎಲ್-ಎನ್ ಬೆಂಬಲ ನೀಡುತ್ತಿರುವುದಾಗಿ ಹೇಳಿದೆ.