ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಅವರ ಅಂಗರಕ್ಷಕರೇ ಇಸ್ಲಾಮಾಬಾದ್‌ನ ಕೊಹ್ಸರ್ ಮಾರ್ಕೆಟ್‌ನ ರೆಸ್ಟೋರೆಂಟ್ ಸಮೀಪ ಅವರ ಅಂಗರಕ್ಷಕರೇ ಗುಂಡಿಟ್ಟು ಹತ್ಯೆಗೈದ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ.
ಸಲ್ಮಾನ್ ತಾಸೀರ್ ಅವರು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ನಿಕಟವರ್ತಿಯಾಗಿದ್ದರು. ಅವರ ಅಂಗರಕ್ಷಕರೇ 9 ಸುತ್ತು ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಸಾವನ್ನಪ್ಪಿರುವುದಾಗಿ ಪಾಕ್ ಟಿವಿ ಚಾನೆಲ್ ವರದಿ ಮಾಡಿದೆ.
ತಾಸೀರ್ ಅವರು ರೆಸ್ಟೋರೆಂಟ್ ಸಮೀಪ ಕಾರಿನಲ್ಲಿ ಕುಳಿತಿದ್ದಾಗ ಅವರ ಭದ್ರತಾ ಅಧಿಕಾರಿಗಳು ಗುಂಡು ಹಾರಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಾಸೀರ್ ಅವರ ಅಂಗರಕ್ಷಕ ಮಲಿಕ್ ಮುಮ್ತಾಜ್ ಹುಸೈನ್ ಖಾದ್ರಿ ಗುಂಡಿಟ್ಟು ಹತ್ಯೆಗೈದಿದ್ದು, ಆತನನ್ನು ಕೂಡಲೇ ಪೊಲೀಸರು ಸುತ್ತುವರಿದು ಸೆರೆಹಿಡಿದಿರುವುದಾಗಿ ವರದಿ ಹೇಳಿದೆ.
ಗವರ್ನರ್ ಸಲ್ಮಾನ್ ತಾಸೀರ್ ಅವರು ಧರ್ಮನಿಂದನೆ ಕಾಯ್ದೆಯನ್ನು ರದ್ದುಪಡಿಸುವ ಬಗ್ಗೆ ಹೆಚ್ಚಿನ ಒಲವು ತೋರಿದ್ದರಿಂದಲೇ ತಾನು ಅವರನ್ನು ಹತ್ಯೆಗೈದಿರುವುದಾಗಿ ಮಲಿಕ್ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ತಾಸೀರ್ ಅವರೊಬ್ಬ ಸುಧಾರಣಾವಾದಿ ಮುಖಂಡರಾಗಿದ್ದರು. ಪಾಕ್‌ನ ಧರ್ಮನಿಂದನೆ ಕಾಯ್ದೆ ಅಂಥ ಕಾನೂನು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಅವರನ್ನು ಕೊಲ್ಲಲು ಮುಂದಾಗಿರುವುದಾಗಿ ಮಲಿಕ್ ತಿಳಿಸಿದ್ದಾನೆ.