ಬಾಂಗ್ಲಾದೇಶದಲ್ಲಿನ ಹಿಂದೂಗಳ ಪವಿತ್ರ ಢಾಕೇಶ್ವರಿ ನ್ಯಾಷನಲ್ ಟೆಂಪಲ್‌ನಲ್ಲಿ ಭಾನುವಾರ ಕಳವು ಘಟನೆ ನಡೆದ ನಂತರ ದೇವರಪೂಜೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿರುವುದು ದೇಶದಲ್ಲಿನ ಹಿಂದೂ ಸಮುದಾಯಕ್ಕೆ ಆಘಾತಕಾರಿ ಘಟನೆಯಾಗಿದೆ. ದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಪೂಜಾ ಕೇಂದ್ರ ಇದಾಗಿದೆ.
ದೇವಸ್ಥಾನದಲ್ಲಿನ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ಸುಮಾರು 4.5 ಲಕ್ಷ ಟಾಕಾದಷ್ಟು ನಗದನ್ನು ಅಪಹರಿಸಲಾಗಿದೆ ಎಂದು ಢಾಕೇಶ್ವರಿ ದೇವಸ್ಥಾನದ ವಕ್ತಾರ ತಾಪನ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಇದೀಗ ಘಟನೆ ನಂತರ ಪುರಾತನ ಢಾಕೇಶ್ವರಿ ನ್ಯಾಷನಲ್ ದೇವಸ್ಥಾನದಲ್ಲಿ ಪೂಜೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಖಾಸಗಿ ಬಿಡಿ ನ್ಯೂಸ್24ನ ಆನ್‌ಲೈನ್ ವರದಿ ಮಾಡಿದೆ.
ಢಾಕೇಶ್ವರಿ ಹಿಂದೂ ಸಮುದಾಯದ ಮೂರನೇ ಅತೀ ದೊಡ್ಡ ದೇವಸ್ಥಾನವಾಗಿದೆ. ಆದರೆ ಹಿಂದೂ ದೇವಾಲಯ ಗುರಿಯಾಗಿರಿಸಿಕೊಂಡು ಕಳೆದ ಒಂದು ತಿಂಗಳಿನಿಂದ ಕಳ್ಳತನ ನಡೆಸುತ್ತಿರುವುದು ಹಿಂದೂ ಸಮುದಾಯಕ್ಕೆ ಆಘಾತಕಾರಿ ಘಟನೆಯಾಗಿದೆ ಎಂದು ಢಾಕಾ ಮೆಟ್ರೋಪಾಲಿಟನ್ ಪೂಜಾ ಸಮಿತಿಯ ಕಾರ್ಯದರ್ಶಿ ಬಾಬುಲ್ ದೇವ್‌ನಾಥ್ ಆರೋಪಿಸಿದ್ದಾರೆ.
ಬಾಂಗ್ಲಾದಲ್ಲಿನ ಬಾರಾದೇಶ್ವರಿ ಕಾಳಿ ದೇವಸ್ಥಾನದಲ್ಲಿ ಡಿಸೆಂಬರ್ 12ರಂದು ಕಳ್ಳತನ ನಡೆದಿತ್ತು. ಅದೇ ರೀತಿ ಜಯಕಾಳಿ ದೇವಸ್ಥಾನದಲ್ಲೂ ಡಿಸೆಂಬರ್ 22ರಂದು ಕಳ್ಳತನ ನಡೆದಿದ್ದು, ಇದೀಗ ಢಾಕೇಶ್ವರಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಸೇರಿದಂತೆ ನಗದನ್ನು ಅಪಹರಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಎಲ್ಲಾ ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿರುವುದಾಗಿ ವರದಿ ಹೇಳಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಎರಡನೇ ಅತಿ ದೊಡ್ಡ ಸಮುದಾಯವಾಗಿದೆ. ದೇಶದಲ್ಲಿನ ಜನಸಂಖ್ಯೆ ಶೇ.10ರಷ್ಟು ಹಿಂದೂಗಳಿದ್ದಾರೆ. ಬಾಂಗ್ಲಾದಲ್ಲಿ ಒಟ್ಟು ಸುಮಾರು 12 ಲಕ್ಷ ಹಿಂದೂ ಸಮುದಾಯವರಿದ್ದಾರೆ.