ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಅಥವಾ ಮಾತನಾಡುವಾಗ 'ಸಂಬಂಧ' ಇಲ್ಲದ ಸೋಮಾಲಿ ಗಂಡಸರಾಗಲಿ, ಮಹಿಳೆಯರಾಗಲಿ ಕೈ ಕುಲುಕುವುದಕ್ಕೆ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ನಿಷೇಧ ಹೇರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಒಂದು ವೇಳೆ ಜನರು ಈ ಮುನ್ನೆಚ್ಚರಿಕೆಯನ್ನು ಧಿಕ್ಕರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕೈಕುಲುಕುವುದು ಕಂಡು ಬಂದಲ್ಲಿ ಅಂತಹವರನ್ನು ಸೆರೆ ಹಿಡಿದು ಗಲ್ಲಿಗೇರಿಸುವುದಾಗಿ ಎಚ್ಚರಿಕೆ ನೀಡಿರುವುದಾಗಿಯೂ ಡೈಲಿ ಮೇಲ್ ವರದಿ ವಿವರಿಸಿದೆ.
ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಕೆಲಸ ಮಾಡುವುದಕ್ಕೂ ಅಲ್ ಖಾಯಿದಾ ನಿಷೇಧ ಹೇರಿತ್ತು. ಹಾಗಾಗಿ ಕೆಲವು ಮಾರ್ಕೆಟ್ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರು ಹೆಚ್ಚಿನ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಕೆಲಸ ಬಿಟ್ಟು ಮನೆ ಸೇರಿಕೊಂಡಿದ್ದಾರೆ.
ಬಸ್ಸಿನಲ್ಲಿ ಮಹಿಳೆಯರು ಒಬ್ಬರೇ ಪ್ರಯಾಣಿಸುತ್ತಾರೆಯೇ ಅಥವಾ ಅರೆನಗ್ನವಾಗಿ ಬಟ್ಟೆ ಧರಿಸಿದ್ದಾರೆಯೇ ಎಂಬ ಬಗ್ಗೆ ಉಗ್ರರು ಬಸ್‌ಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿರುವ ಘಟನೆಯೂ ಆಗಾಗ ನಡೆಯುತ್ತದೆ ಎಂದು ವಿದ್ಯಾರ್ಥಿ ಹಮೀದ್ ಉಸ್ಮಾನ್ ಪತ್ರಿಕೆಗೆ ತಿಳಿಸಿದ್ದಾನೆ.
ಉಗ್ರರ ಉಪಟಳ ಇಷ್ಟಕ್ಕೆ ನಿಂತಿಲ್ಲ, ಸಿನಿಮಾ ವೀಕ್ಷಿಸುವುದಾಗಲಿ, ಸಂಗೀತ ಕೇಳುವುದು ಹಾಗೂ ಬಾರ್‌ಗಳನ್ನು ಕೂಡ ನಿಷೇಧಿಸಿದೆ. ಯಾಕೆಂದರೆ ಅವೆಲ್ಲವೂ ಇಸ್ಲಾಮ್‌ಗೆ ವಿರುದ್ಧ ಎಂಬುದು ಉಗ್ರರ ಫರ್ಮಾನು. ಉಗ್ರರು ಮೊಗಾದಿಶುವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಅವರೇ ಪ್ರಾಬಲ್ಯ ಹೊಂದಿರುವುದಾಗಿ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದು, ಸೋಮಾಲಿ ಸರಕಾರ ಸೂಕ್ತ ರಕ್ಷಣೆ ಕೊಡುವಲ್ಲಿಯೂ ವಿಫಲವಾಗಿದೆ ಎಂದ ಆರೋಪಿಸಿದ್ದಾರೆ.