ಸುಮಾರು 120 ವರ್ಷಗಳಲ್ಲಿಯೇ ಕಂಡರಿಯದ ಪ್ರವಾಹಕ್ಕೆ ಆಸ್ಟ್ರೇಲಿಯಾದ ಪ್ರಮುಖ ನಗರವಾದ ಬ್ರಿಸ್ಬೇನ್ ಜನರು ತತ್ತರಿಸಿ ಹೋಗಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. 59 ಜನರು ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಸ್ಬೇನ್‌ನಲ್ಲಿರುವ ನದಿ ಉಕ್ಕಿ ಹರಿದ ಪರಿಣಾಮ ಆಸ್ಟ್ರೇಲಿಯಾದ 3ನೇ ಪ್ರಮುಖ ನಗರವಾದ ಬ್ರಿಸ್ಬೇನ್ ಜನರು ಕಂಗಾಲಾಗಿ ಹೋಗಿದ್ದಾರೆ. 1893ರ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಪ್ರವಾಹಕ್ಕೆ ಜನ ಜೀವನವೇ ಅಸ್ತವ್ಯಸ್ತಗೊಂಡಂತಾಗಿದೆ.
ಪ್ರವಾಹದಿಂದಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿರುವುದಾಗಿ ಬ್ರಿಸ್ಬೇನ್ ಮೇಯರ್ ಕ್ಯಾಂಪ್‌ಬೆಲ್ ನ್ಯೂಮನ್ ತಿಳಿಸಿದ್ದಾರೆ. ಗುಡ್ಡ ಪ್ರದೇಶದ ನಗರಗಳಲ್ಲಿ ಪ್ರವಾಹದಿಂದ ಕಾರು, ಮಿನಿ ಬಸ್‌ಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿವೆ ಎಂದು ವಿವರಿಸಿದ್ದಾರೆ.
ಜನರಿಗೆ ಅಗತ್ಯವಾಗಿ ಬೇಕಾದ ಬ್ರೆಡ್, ಹಾಲು, ನೀರಿನ ಬಾಟಲು, ಕ್ಯಾಂಡಲ್‌ಗಳು ಎಲ್ಲಿಯೂ ಸಿಗುತ್ತಿಲ್ಲವಂತೆ. ಬೇಕರಿಯಲ್ಲಿದ್ದ ಬ್ರೆಡ್ ಸಂಪೂರ್ಣವಾಗಿ ಖಾಲಿಯಾಗಿದ್ದರಿಂದ ಬೇಕರಿ ಬಂದ್ ಆಗಿರುವುದಾಗಿ ಸ್ಥಳೀಯರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಆದರೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುವುದಾಗಿ ಮೇಯರ್ ತಿಳಿಸಿದ್ದಾರೆ.