ಹಜ್ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬರ ಬಾಯ್ಮುಚ್ಚಿಸಲು ಸುಪ್ರೀಂಕೋರ್ಟ್ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಚೌದರಿ ತನಿಖಾ ಏಜೆನ್ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರದ ಹಗರಣದ ತನಿಖೆ ನಡೆಸುತ್ತಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್ಐಎ) ತೊಳಲಾಟದಲ್ಲಿದೆ. ಅಲ್ಲದೇ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಫ್ಐಎ ನಿರ್ದೇಶಕ ವಾಸಿಂ ಅಹ್ಮದ್ ಅವರನ್ನು ತೆಗೆದು ಹಾಕುವಂತೆ ನ್ಯಾಯಾಧೀಶರು ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ತೊಂದರೆಗೊಳಗಾದ ಹಜ್ ಯಾತ್ರಾರ್ಥಿಗಳಿಗೆ ಸರಕಾರ 700 ಸೌದಿ ರಿಯಲ್ಸ್‌ಗಳನ್ನು ನೀಡಿರುವ ಬಗ್ಗೆ ಸುಪ್ರೀಂಕೋರ್ಟ್ ಶ್ಲಾಘಿಸಿರುವುದಾಗಿ ದಿ ಡೈಲಿ ಟೈಮ್ಸ್ ವರದಿ ವಿವರಿಸಿದೆ.
ಹಜ್ ಯಾತ್ರೆ ಸಂದರ್ಭದಲ್ಲಿ ನಡೆದ ಅವ್ಯವಸ್ಥೆ, ಹಗರಣದ ಕುರಿತು ಅಪೆಕ್ಸ್ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಚೌಧರಿ ಸೇರಿದಂತೆ ನ್ಯಾ.ಜಾವೆದ್ ಇಕ್ಬಾಲ್, ನ್ಯಾ.ತಾಸ್ಸಾದಕ್ ಹುಸೈನ್ ಜಿಲ್ಲಾನಿ, ನ್ಯಾ.ರಾಜಾ ಫಾಯ್ಯಾಜ್, ನ್ಯಾ.ಅನ್ವರ್ ಜಾಹೀರ್ ಜಾಮಾಲಿ, ನ್ಯಾ.ಗುಲಾಂ ರಬ್ಬಾನಿ ಮತ್ತು ನ್ಯಾ.ಖಾಲಿಉರ್ ರೆಹಮಾನ್ ರಾಮ್ಡೈ ನೇತೃತ್ವದ ಪೀಠ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.
ಎಫ್ಐಎ ಪ್ರಸಕ್ತ ಡಿಜಿಯನ್ನು ಕೂಡಲೇ ತೆಗೆದು ಹಾಕುವ ಬಗ್ಗೆ ಅಟಾರ್ನಿ ಜನರಲ್ ಮೌಲ್ವಿ ಅನ್ವರುಲ್ ಹಕ್ ಅವರು ಸರಕಾರದ ಜತೆ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ ಎಫ್ಐಎ ತನಿಖಾಧಿಕಾರಿಯನ್ನಾಗಿ ಹುಸೈನ್ ಅಸ್ಗರ್ ಅವರನ್ನು ನೇಮಕ ಮಾಡಿ ತನಿಖೆಯನ್ನು ಮುಂದುವರಿಸುವಂತೆಯೂ ಪೀಠ ಸೂಚನೆ ನೀಡಿದೆ.