ರಿಯೋ ಡೇ ಜನೇರಿಯೋನ ಗುಡ್ಡಗಾಡು ಪ್ರದೇಶದಲ್ಲಿ ಪ್ರವಾಹ ಮತ್ತು ಮಣ್ಣು ಕುಸಿತಕ್ಕೆ ಸುಮಾರು 270 ಮಂದಿ ಬಲಿಯಾಗಿರುವುದಾಗಿ ಬ್ರೆಜಿಲ್ ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ ಪ್ರವಾಹದಿಂದಾಗಿ ಜನ ಜೀವನ ತತ್ತರಿಸಿಹೋಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ರಿಯೋದ ಸೆರ್ರಾನಾ ಪ್ರದೇಶದಲ್ಲಿ ಕತ್ತಲು ಮತ್ತು ಅಪಾಯದ ಪರಿಸ್ಥಿತಿ ಹೆಚ್ಚಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿಯೇ ಮಣ್ಣು ಕುಸಿದು ಬಿದ್ದು ಮೂರು ಮಂದಿ ಅಗ್ನಿಶಾಮಕದಳದ ಸಿಬ್ಬಂದಿ ಸಾವನ್ನಪ್ಪಿರುವ ಘಟನೆಯೂ ನಡೆದಿದೆ.
ಪ್ರವಾಹದಿಂದಾಗಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ರಸ್ತೆ, ಸೇತುವೆ ಕೊಚ್ಚಿಕೊಂಡು ಹೋಗಿದೆ. ದೂರವಾಣಿ, ವಿದ್ಯುತ್ ಸಂಪರ್ಕ ಕೆಲವು ಪ್ರದೇಶಗಳಲ್ಲಿ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ದೊಡ್ಡ ಪ್ರಮಾಣದ ಆಪತ್ತು. ಪ್ರವಾಹದಿಂದಾಗಿ ಟೆರೆಸೋಪೋಲಿಸ್, ಜೋರ್ಗೆ, ಮಾರಿಯೋ, ಸೆಡ್ಲಾಸೆಕ್ ಪ್ರದೇಶ ಪ್ರವಾಹದಿಂದ ತತ್ತರಿಸಿ ಹೋಗಿರುವುದಾಗಿ ಮೇಯರ್ ಹೇಳಿರುವುದಾಗಿ ಗ್ಲೋಬೋ ನ್ಯೂಸ್ ಟೆಲಿವಿಷನ್ ವರದಿ ಮಾಡಿದೆ.