ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಪಾಕಿಸ್ತಾನದ ವಿರುದ್ಧವಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೋಯ್ ಬಿಡೆನ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಮತ್ತು ಭಾರತದ ಗಳಸ್ಯ-ಕಂಠಸ್ಯ ನೆರೆಯ ಪಾಕಿಸ್ತಾನವನ್ನು ಕುಗ್ಗಿಸಿ, ನಾಶ ಮಾಡುವ ಸಂಚಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿದ ಅವರು, ಅಮೆರಿಕ ಮತ್ತು ಇಸ್ಲಾಮಾಬಾದ್ ನಡುವಿನ ಸ್ನೇಹ-ಸಂಬಂಧ ಅಲ್-ಖಾಯಿದಾ, ತಾಲಿಬಾನ್ ವಿರುದ್ದ ಹೋರಾಡುವ ಮೂಲಕ ಮತ್ತಷ್ಟು ಬಲಗೊಂಡಿದೆ ಎಂದು ಹೇಳಿದರು.
ಬಿಡೆನ್ ಅವರು ಒಂದು ದಿನದ ಭೇಟಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ಈ ಆರೋಪಕ್ಕೆ ನೀಡಿದ ಪ್ರತಿಕ್ರಿಯೆ ಇದಾಗಿದೆ. ಆದರೂ ದೇಶದಲ್ಲಿ ಅಮೆರಿಕ ವಿರೋಧಿ ಮನಸ್ಸುಗಳು ಹುಟ್ಟಿಕೊಂಡಿರುವುದಾಗಿಯೂ ಅವರು ಆರೋಪಿಸಿದರು.
ಅಮೆರಿಕ ಇಸ್ಲಾಮ್ ವಿರೋಧಿಯಲ್ಲ, ಆದರೆ ಪಾಕಿಸ್ತಾನ ಬುಡಕಟ್ಟು ಪ್ರದೇಶದಲ್ಲಿನ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೇ ಅಮೆರಿಕದ ಕೆಲವು ನೀತಿ-ರೀತಿಗಳು ಭಾರತದ ಪರವಾಗಿದ್ದು, ಪಾಕಿಸ್ತಾನಿ ವಿರೋಧಿ ಎಂಬ ಭಾವನೆ ಮೂಡಿಸಿಕೊಳ್ಳುವುದು ಸರಿಯಲ್ಲ. ನಮ್ಮದು ಭಯೋತ್ಪಾದನೆ ವಿರುದ್ಧದ ಹೋರಾಟ ವಿನಃ, ಯಾವುದೇ ಧರ್ಮ, ದೇಶದ ವಿರುದ್ಧವಲ್ಲ ಎಂದು ಬಿಡೆನ್ ಹೇಳಿದರು.