ಮುಷ್‌ಗೆ ಗಲ್ಲು ಶಿಕ್ಷೆ ನೀಡಿ;ಪಾಕ್ ವಕೀಲ ಸುಪ್ರೀಂಗೆ ಮನವಿ
ಇಸ್ಲಾಮಾಬಾದ್, ಶನಿವಾರ, 22 ಜನವರಿ 2011( 09:32 IST )
ದೇಶದ್ರೋಹ ಹಾಗೂ ಅಸಂವಿಧಾನಿಕ ನಡವಳಿಕೆ ಎಂಬಂತೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಅರಾಜಕತೆ ಸೃಷ್ಟಿಸಿದ್ದ ಪಾಕಿಸ್ತಾನ ಮಿಲಿಟರಿಯ ಮಾಜಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಅವರನ್ನು ಗಲ್ಲಿಗೇರಿಸಬೇಕೆಂದು ಪಾಕ್ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ ಕೇಳಿಕೊಂಡಿದ್ದಾರೆ.
ಮುಷರ್ರಫ್ ಅವರ ತುರ್ತು ಪರಿಸ್ಥಿತಿ ಕ್ರಮವನ್ನು ಬೆಂಬಲಿಸಿ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಶಾಮೀಲಾಗಿರುವ ಲಾಹೋರ್ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಬಾಸಿಟ್ ಅವರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಮುಷ್ ವಿರುದ್ಧ ಈ ರೀತಿ ಕೋರಿಕೆ ಸಲ್ಲಿಸಿದ್ದಾರೆ.
ಗುರುವಾರ ನಾಲ್ವರು ನ್ಯಾಯಾಧೀಶರ ಮುಂದೆ ಹಾಜರಾಗಲು ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಬಾಸಿಟ್ ಅವರು, 2007ರಲ್ಲಿ ಮುಷರ್ರಫ್ ಅವರು ದೇಶದ್ರೋಹ ಎಸಗಿದ್ದಕ್ಕೆ ಅವರೇ ಹೊಣೆ ಎಂದು ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದೆ ಎಂದು ತಿಳಿಸಿದ್ದರು.
ನಂತರ ವಿಚಾರಣೆ ಸಂದರ್ಭದಲ್ಲಿ ದೇಶದ್ರೋಹ ಎಸಗಿದ ಆರೋಪಿಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದು ನಿಮ್ಮ ಅಭಿಪ್ರಾಯ ಎಂದು ಬಾಸಿಟ್ ಅವರನ್ನು ಸುಪ್ರೀಂ ಪೀಠ ಕೇಳಿದಾಗ, ಮುಷ್ ಎಸಗಿದ್ದು ದೇಶದ್ರೋಹ, ಹಾಗಾಗಿ ಸಂವಿಧಾನದ ಪರಿಚ್ಛೇದ 6ರ ಅನ್ವಯ ಗಲ್ಲುಶಿಕ್ಷೆ ನೀಡಬೇಕೆಂದು ಪ್ರತಿಪಾದಿಸಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
ಅಷ್ಟೇ ಅಲ್ಲ ನ್ಯಾಯಾಧೀಶರು ಕೂಡ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ನ್ಯಾಯಾಂಗವನ್ನು ಕಾಪಾಡುವುದಾಗಿ ಪ್ರತಿಜ್ಞೆಗೈದಿರುತ್ತಾರೆ. ಆದರೆ ಮುಷರ್ರಫ್ ಬೆಂಬಲಿಗರು ಅದನ್ನು ಉಲ್ಲಂಘಿಸಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಹಾಗಾಗಿ ಮುಷರ್ರಫ್ ಅವರು ಕೈಗೊಂಡ ಅಸಂವಿಧಾನಿಕ ನಿರ್ಧಾರಕ್ಕೆ ಯಾರೆಲ್ಲ ಬೆಂಬಲ ನೀಡಿದ್ದಾರೆ ಅವರಿಗೆಲ್ಲಾ ಸುಪ್ರೀಂ ನೋಟಿಸ್ ಜಾರಿ ಮಾಡಬೇಕೆಂದು ಬಾಸಿಟ್ ಕೋರಿದ್ದಾರೆ.