ಸುಮಾರು ಮೂರು ದಶಕಗಳ ಕಾಲ ದೇಶದಲ್ಲಿ ಸಮರ ಸಾರಿ ಕೊನೆಗೂ ಶ್ರೀಲಂಕಾ ಮಿಲಿಟರಿ ಪಡೆಯ ಕಾರ್ಯಾಚರಣೆ ನಂತರ ಎಲ್‌ಟಿಟಿಇ ನೆಲಕಚ್ಚಿತ್ತು. ಇದೀಗ ಸುಮಾರು ನೂರಾರು ತಮಿಳು ಯುವಕರು ಶ್ರೀಲಂಕಾ ಪೊಲೀಸ್ ಪಡೆಗೆ ನೇಮಕಗೊಂಡಿದ್ದಾರೆ.
ಯುವತಿಯರು ಸೇರಿದಂತೆ ಸುಮಾರು ಒಂದು ಸಾವಿರ ತಮಿಳರನ್ನು ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್ಸ್ ಹಾಗೂ ಪೊಲೀಸ್ ವಾಹನ ಚಾಲಕರ ಹುದ್ದೆಗೆ ಶ್ರೀಲಂಕಾ ಪೊಲೀಸ್ ಇಲಾಖೆ ನೇಮಕ ಮಾಡಿಕೊಂಡಿದೆ ಎಂದು ಕೊಲಂಬೊ ಪತ್ರಿಕೆಯ ಆನ್‌ಲೈನ್ ಎಡಿಷನ್‌ನಲ್ಲಿ ತಿಳಿಸಿದೆ.
ಸಂದರ್ಶನ ಮಂಡಳಿಯಲ್ಲಿ ನಾಲ್ಕು ಹಿರಿಯ ಪೊಲೀಸ್ ಸೂಪರಿಟೆಂಡೆಂಟ್ ಹಾಗೂ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳು ತಮಿಳು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಪೊಲೀಸ್ ಸೇವೆಗೆ ನೇಮಕಗೊಂಡ ತಮಿಳು ಯುವಕರನ್ನು ಈ ಹಿಂದೆ ತಮಿಳು ಟೈಗರ್ಸ್ ಮತ್ತು ಶ್ರೀಲಂಕಾ ಮಿಲಿಟರಿ ನಡುವೆ ಸಮರ ನಡೆದ ಉತ್ತರ ಪ್ರಾಂತ್ಯದ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಜನವರಿ ಮೊದಲ ವಾರದಲ್ಲಿ ಸುಮಾರು 356 ತಮಿಳು ಯುವಕರನ್ನು ಪೊಲೀಸ್ ಇಲಾಖೆಗೆ ನೇಮಕಮಾಡಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.