ಇಂಗ್ಲೆಂಡ್ ನಿವಾಸಿಯೊಬ್ಬರು ನಲವತ್ಮೂರು ವರ್ಷಗಳಲ್ಲಿ ಒಂದೇ ಒಂದು ದಿನವೂ ಕೆಲಸಕ್ಕೆ ರಜೆ ಹಾಕಿಲ್ಲ! ಇವರು ಇಲ್ಲಿನ ಸ್ಥಳೀಯ ಆಡಳಿತದಲ್ಲಿ ಸರ್ವೇಯರ್ ಆಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.
1968ರಲ್ಲಿ ಎಸ್ಸೆಕ್ಸ್‌ನ ಸ್ಥಳೀಯ ಬಾಸಿಲ್ಡನ್ ಕೌನ್ಸಿಲ್‌ನಲ್ಲಿ ಸರ್ವೇಯರ್ ಆಗಿ ನಿಯುಕ್ತಿಗೊಂಡ 66 ವರ್ಷದ ಜಿಮ್ ಓವೆನ್ ಯಾವತ್ತೂ ರಜೆ ಹಾಕಿಲ್ಲ. ತಮ್ಮ ಕಾರ್ಯದಲ್ಲಿ ಸದಾ ಪ್ರಾಮಾಣಿಕ ಸೇವೆಯನ್ನು ಪಾಲಿಸುತ್ತಾ ಬಂದಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಎರಡು ಮಕ್ಕಳು ಹಾಗೂ ಮೂರು ಮೊಮ್ಮಕ್ಕಳನ್ನು ಹೊಂದಿದ್ದರೂ, ಇಂದಿಗೂ ನಗರಸಭೆಯಲ್ಲಿ ಪೂರ್ಣಾವಧಿ ಕೆಲಸ ಮಾಡುವ ಜಿಮ್‌ಗೆ ನಿವೃತ್ತಿಯಾಗುವ ಯಾವುದೇ ಯೋಜನೆಯಿಲ್ಲ.
'ಬೆಳಿಗ್ಗೆ ಎದ್ದಾಗ ಆರೋಗ್ಯ ಸರಿಯಿಲ್ಲದೆಯೋ ಅಥವಾ ಮನಸ್ಸಿಗೆ ಕಷ್ಟ ಅನಿಸಿದಾಗಲೋ ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು. ಆದರೆ, ಸದಾ ಕಾಲ ನನ್ನ ಕೆಲಸವನ್ನು ಪ್ರೀತಿಸಿದ್ದೇನೆ, ಹೀಗಾಗಿ ನನ್ನ ತಂಡಕ್ಕೂ ಸಮಸ್ಯೆ ತರುವುದು ಇಷ್ಟವಿರಲಿಲ್ಲ' ಎಂದಿದ್ದಾರೆ ಜಿಮ್ ಓವೆನ್.
ಹೆತ್ತವರು ಯೋಧ ಪರಂಪರೆಯವರಾದರಿಂದಲೇ, ಪ್ರತೀ ದಿನ ಎದ್ದು ಕೆಲಸಕ್ಕೆ ಹೋಗುವ ಅಭ್ಯಾಸ ನನಗೆ ಸಣ್ಣದಿಂದಲೇ ರೂಢಿಯಾಗಿದೆ. ಅದರಲ್ಲಿ ಘನಂದಾರಿ ಅನ್ನುವಂತದ್ದೇನಿಲ್ಲ ಎಂದಿದ್ದಾರೆ ಜಿಮ್.
ಇದಕ್ಕೆ ನಾನು ಸೇವಿಸುತ್ತಿದ್ದ ಆರೋಗ್ಯಪೂರ್ಣ ಆಹಾರವೂ ಪೂರಕವಾಗಿದೆ. ಅಲ್ಲದೆ ನಾನು ಧೂಮಪಾನ ಮಾಡುವುದಿಲ್ಲ. ಹಾಗೂ ನನ್ನ ಕೆಲಸವೂ ನನ್ನನ್ನು ಶುಭ್ರ ಗಾಳಿಯಿರುವ ಹೊರವಲಯದಲ್ಲಿ ತೊಡಗಿಸಿಕೊಂಡಿದೆ. ಇವೆಲ್ಲವೂ ನನ್ನನ್ನು ಬೆಳೆಸಲು ಸಹಕಾರಿಯಾಗಿದೆ ಎಂದಿದ್ದಾರೆ. ತಾನು ಬೆಳೆದ ಸೌತ್‌ಎಂಡ್ ಮತ್ತು ಎಸ್ಸೆಕ್ಸ್ ಸುತ್ತಮುತ್ತಲೂ ಪತ್ರಿಕೆ ಹಂಚುವ ಮೂಲಕ ಸಣ್ಣ ವಯಸ್ಸಿನಲ್ಲೇ ಜಿಮ್ ಕೆಲಸಕ್ಕೆ ಹೋಗಲು ಆರಂಭಿಸಿದ್ದರು.
1968ರಲ್ಲಿ ಸರ್ವೇಯರ್ ಆಗಿ ಕೆಲಸಕ್ಕೆ ಸೇರಿದ ಜಿಮ್, ಕಳೆದ ಹಲವು ವರ್ಷಗಳಿಂದ ಹಂತಹಂತವಾಗಿ ಮೇಲೇರಿ ವ್ಯವಸ್ಥಾಪಕನ ಹುದ್ದೆಯವರೆಗೂ ತಲುಪಿದ್ದಾರೆ. ನಿವೃತ್ತಿ ವಯಸ್ಸನ್ನು ದಾಟಿದ್ದರೂ, ಎಷ್ಟು ವರ್ಷದವರೆಗೆ ಇವರು ನನ್ನನ್ನು ಉಳಿಸಿಕೊಳ್ಳುತ್ತಾರೋ ಅಲ್ಲಿಯವರೆಗೂ ಕೆಲಸ ಮಾಡುತ್ತಿರುತ್ತೇನೆ ಎಂದಿದ್ದಾರೆ ಜಿಮ್ ಓವೆನ್.
ಇದು ನಮ್ಮ ಸಿಬ್ಬಂದಿಯ ಕೆಲಸದಲ್ಲಿನ ನಿಷ್ಠೆಯ ಪ್ರತೀಕ. ಆತ್ಮಸಾಕ್ಷಿಯಿಂದ ಕಾರ್ಯಪಾಲನೆ ಮಾಡಿದ ನೌಕರರಿಗೆ ಜಿಮ್ ಒಬ್ಬ ಉತ್ತಮ ಉದಾಹರಣೆ ಎಂದಿದ್ದಾರೆ ಮಂಡಳಿಯ ಕಾರ್ಯಕಾರಿ ನಿರ್ದೇಶಕ ಕ್ರಿಸ್ ವೈಟ್.