ಅಬ್ಬರದ ಸಂಗೀತದ ಶಬ್ದದಿಂದ ಆಕ್ರೋಶಗೊಂಡ ಸಿಕ್ ಅಪ್ಪನೊಬ್ಬ ತನ್ನ ಇಪ್ಪತ್ನಾಲ್ಕು ವರ್ಷದ ಮಗಳನ್ನೇ ಕೊಂದಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದ್ದು, ಇಲ್ಲಿನ ಕ್ರೌನ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿದೆ.
ಮೂಲತಃ ಸಿಕ್ ಸಮುದಾಯಕ್ಕೆ ಸೇರಿರುವ ಐವತ್ನಾಲ್ಕು ವರ್ಷದ ಗುರ್‌ಮೀತ್ ಉಭಿ, ಅಬ್ಬರದ ಸಂಗೀತದ ಧ್ವನಿಯನ್ನು ಕಡಿಮೆಗೊಳಿಸಲು ಕೇಳಿಕೊಂಡರೂ ಒಪ್ಪದ ತನ್ನ ಮಗಳೊಂದಿಗೆ ಜಟಾಪಟಿ ನಡೆಸಿ ಕೊನೆಗೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪ್ರಕರಣ ಆಲಿಸಿದ ಲೀಸೆಸ್ಟರ್ ನ್ಯಾಯಪೀಠ ತಿಳಿಸಿದೆ.
ಈ ಘಟನೆ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದು, ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ವರದಿಯಾದಂತೆ ರಾತ್ರಿ ಪಾಳಿಯ ಕೆಲಸ ಮುಗಿಸಿ ಸುಖನಿದ್ರೆಯಲ್ಲಿದ್ದ ಉಭಿ ತನ್ನ ಮಗಳು ಹಾಕಿದ್ದ ಅಬ್ಬರದ ಸಂಗೀತದಿಂದ ಆಕ್ರೋಶಿತನಾಗಿದ್ದ.
ರಿಮೋಟ್ ಬಳಸಿ ಸಂಗೀತದ ಧ್ವನಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿದಾಗ ಅಪ್ಪ ಮಗಳ ಜಗಳ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಕೋಪೋದ್ರಿಕ್ತನಾಗಿದ್ದ ಉಭಿ ಮಗಳ ಕತ್ತು ಹಿಸುಕಿ ಕೊಂದುಬಿಟ್ಟಿದ್ದ.
ಘಟನೆ ನಂತರ ಪೊಲೀಸ್ ಸ್ಟೇಷನ್‌ಗೆ ತೆರಳಿದ ಉಭಿ ತಪ್ಪೊಪ್ಪಿಕೊಂಡಿದ್ದ. ಅಷ್ಟೆ ಅಲ್ಲ, ಟೆಲ್‌ಫೋರ್ಡ್ ಮತ್ತು ಶ್ರೋಪ್‌ಶೈರ್ ಪ್ರದೇಶದಲ್ಲಿರುವ ತನ್ನ ಗೆಳೆಯರು ಮತ್ತು ಕುಟುಂಬಕ್ಕೆ ದೂರವಾಣಿ ಕರೆಮಾಡಿ 'ಗುಡ್‌ಬೈ ಮತ್ತು ಗಾಡ್ ಬ್ಲೆಸ್ ಯೂ' ಹೇಳಿಬಿಡಿ ಎಂದು ನನಗೆ ತಿಳಿಸಿದ್ದರು ಎಂದು ಉಭಿ ಪರ ವಕೀಲ ರಾಚಲ್ ಬ್ರಾಂಡ್ ವಿಚಾರಣೆ ವೇಳೆ ತಿಳಿಸಿದ್ದಾರೆ.