ಇಸ್ಲಾಮಾಬಾದ್, ಬುಧವಾರ, 23 ಫೆಬ್ರವರಿ 2011( 20:14 IST )
ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರನ್ನು ಗಡಿಪಾರು ಮಾಡುವಂತೆ ಬ್ರಿಟನ್‌ನ ಮೇಲೆ ಒತ್ತಡ ಹೇರಲ್ಲ ಎಂದು ಪಾಕಿಸ್ತಾನ ಹೇಳುವ ಮೂಲಕ ತನ್ನ ರಾಗ ಬದಲಿಸಿದೆ.
ಪರ್ವೆಜ್ ಮುಷರ್ರಫ್ ಅವರನ್ನು ಗಡಿಪಾರು ಮಾಡಿ ಎಂದು ಬ್ರಿಟನ್ ಸರಕಾರಕ್ಕೆ ದುಂಬಾಲು ಬೀಳಲ್ಲ ಎಂದು ಆಂತರಿಕ ಸಚಿವ ರೆಹಮಾನ್ ಮಲಿಕ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಮಲಿಕ್ ಜತೆ ಬ್ರಿಟನ್ ಇಮಿಗ್ರೇಷನ್ ಸಚಿವ ಡಾಮಿಯನ್ ಗ್ರೀನ್ ಮತ್ತು ಬ್ರಿಟನ್‌ನ ಆಡಳಿತಾರೂಢ ಕನ್ಸರ್‌ರ್ವೆಟಿವ್ ಪಕ್ಷದ ಅಧ್ಯಕ್ಷೆ ಸಾಯೀದಾ ವಾರ್ಸಿ ಜತೆಗಿದ್ದರು.
ಬೆನಜೀರ್ ಹತ್ಯಾ ಪ್ರಕರಣದಲ್ಲಿ ಮುಷರ್ರಫ್ ತಲೆ ತಪ್ಪಿಸಿಕೊಂಡಿರುವ ಆರೋಪಿ ಎಂದು ಪಾಕ್ ಕೋರ್ಟ್ ಘೋಷಿಸಿತ್ತು. ಅಲ್ಲದೇ ಮುಷರ್ರಫ್ ಅವರ ಗಡಿಪಾರು ವಿಚಾರದ ಕುರಿತಂತೆ ಲಂಡನ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳು ಬ್ರಿಟನ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್ಐಎ) ಪ್ರಾಸಿಕ್ಯೂಟರ್ ಮುಹಮ್ಮದ್ ಅಜಾರ್ ಚೌಧರಿ ಹೇಳಿಕೆ ನೀಡಿದ ಬೆನ್ನಲ್ಲೇ ಮಲಿಕ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
2009ರಲ್ಲಿ ಸ್ವಯಂ ಆಗಿ ಬ್ರಿಟನ್‌ನಲ್ಲಿ ಬಂದು ನೆಲೆಸಿರುವ ಮಾಜಿ ಸರ್ವಾಧಿಕಾರಿ ಮುಷರ್ರಫ್ ಅವರನ್ನು ಗಡಿಪಾರು ಮಾಡುವ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಬೇಕೆ ಎಂದು ಕೇಳಿದಾಗ, ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ರೆಹಮಾನ್ ಮಲಿಕ್ ತಿಳಿಸಿರುವುದಾಗಿ ಗ್ರೀನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆನಜೀರ್ ಹತ್ಯಾ ಪ್ರಕರಣದ ವಿಚಾರಣೆಯನ್ನು ಮಾರ್ಚ್ 5ಕ್ಕೆ ನಿಗದಿಪಡಿಸಿದೆ. ಆ ಸಂದರ್ಭದಲ್ಲಿ ಮುಷರ್ರಫ್ ಅವರನ್ನು ಖುದ್ದು ಕೋರ್ಟ್‌ಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಟರ್‌ಗೆ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಎಫ್ಐಎ ತನಿಖಾ ತಂಡ ಇಸ್ಲಾಮಾಬಾದ್‌ನಲ್ಲಿರುವ ಮುಷರ್ರಫ್ ಅವರ ನಿವಾಸಕ್ಕೆ ಬಂಧನದ ವಾರಂಟ್ ನೀಡಲಿರುವುದಾಗಿ ತಿಳಿಸಿದೆ. ಅದೇ ರೀತಿ ಲಂಡನ್ ನಿವಾಸಕ್ಕೂ ಬಂಧನ ಆದೇಶದ ಪ್ರತಿಯನ್ನು ರವಾನಿಸುವುದಾಗಿ ಹೇಳಿದೆ.