ಅಫ್ಘಾನಿಸ್ತಾನದ ಈಶಾನ್ಯ ಭಾಗದ ಜಿಲ್ಲೆಯೊಂದನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು, ಸುಮಾರು 40 ಮಂದಿಯನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಗಡಿಭಾಗ ಸಮೀಪದ ನೌರಿಸ್ತಾನ ಪ್ರಾಂತ್ಯದ ವೈಗಾಲ್ ಜಿಲ್ಲೆಯನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಸ್ಥಳೀಯ ಭದ್ರತಾ ಪಡೆಗಳು ಭಾರೀ ಪ್ರಮಾಣದ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿಯೂ ಮಾಧ್ಯಮದ ವರದಿಯೊಂದು ವಿವರಿಸಿದೆ.
ಬೃಹತ್ ಸಂಖ್ಯೆಯಲ್ಲಿ ಶಸ್ತ್ರಸಜ್ಜಿತರಾಗಿ ಆಗಮಿಸಿದ್ದ ತಾಲಿಬಾನ್ ಉಗ್ರರು ಜಿಲ್ಲಾಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಅಧಿಕಾರಿ ಶಂಶುಲ್ ರಹಮಾನ್ ಜಾಹಿದ್ ತಿಳಿಸಿದ್ದಾರೆ.
ಜಿಲ್ಲೆಯನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಸುಮಾರು 12 ಮಂದಿ ಪೊಲೀಸರು ಹಾಗೂ ಶಸ್ತ್ರಾಸ್ತ್ರ, ಇನ್ನಿತರ ಆಯುಧಗಳನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ವಕ್ತಾರ ಝಾಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.