ಮುಂಬೈ ಬಾಂಬ್ ಸ್ಪೋಟದ ಪ್ರಮುಖ ಸೂತ್ರಧಾರಿ ಡೇವಿಡ್ ಹೆಡ್ಲಿ ಮತ್ತು ಆತನ ಸಹಚರ ತವ್ವೂರ್ ಹುಸೈನ್ ರಾಣಾ ಅವರ ವಿಚಾರಣೆ ಮುಂದಿನ ತಿಂಗಳು ಚಿಕಾಗೊದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಕುಮ್ಮಕ್ಕಿನಿಂದ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಹಾಗೂ ಪ್ರಸ್ತುತ ಕೆನಡಾದ ಪ್ರಜೆಯಾಗಿರುವ ತವ್ವೂರ್ ಹುಸೈನ್ ರಾಣಾ ಮತ್ತು ಆತನ ಸಹಚರ ಡೇವಿಡ್ ಹೆಡ್ಲಿಯ ವಿಚಾರಣೆ ಕಳೆದ ಫೆಬ್ರವರಿಯಲ್ಲೇ ನಡೆಯಬೇಕಿತ್ತು. ಆದರೆ ಈ ಭಯೋತ್ಪಾದಕರ ವಕೀಲರ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಲಾಗಿತ್ತು.
160ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ ಈ ಅಮಾನವೀಯ ಭಯೋತ್ಪಾದನಾ ದಾಳಿಯಲ್ಲಿ ಒಳಸಂಚು ರೂಪಿಸಿದ್ದ ಡೇವಿಡ್ ಹೆಡ್ಲಿ ಜೊತೆ ರಾಣಾ ಕೂಡ ಶಾಮೀಲಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿರುವ ಹಿನ್ನಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.
2008ರ ಮುಂಬೈ ಸ್ಪೋಟಕ್ಕೆ ಒಳಸಂಚು ನಡೆಸಿದ್ದ ಈ ಇಬ್ಬರು ಆರೋಪಿಗಳು ಇನ್ನು ತಾನೇ ನ್ಯಾಯಾಲಯದಲ್ಲಿ ಸಲ್ಲಿಸಬೇಕಿರುವ ಅರ್ಜಿಯಲ್ಲಿ 'ತಾವು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಪರವಾಗಿ ಕಾರ್ಯಮಾಡಬೇಕೆಂದು ನಂಬಿದ್ದೆವು' ಎಂದು ಹೇಳಲು ಉದ್ದೇಶಿಸಿರುವುದಾಗಿ ದಿ ಗ್ಲೋಬ್ ಎಂಡ್ ಮೈಲ್ ಪತ್ರಿಕೆ ವರದಿ ಮಾಡಿದೆ.
ಚಿಕಾಗೊ, ನ್ಯೂಯಾರ್ಕ್ ಮತ್ತು ಟೊರಾಂಟೊದಲ್ಲಿ ಪಾಸ್‌ಪೋರ್ಟ್ ಕಚೇರಿಗಳನ್ನು ನಡೆಸುತ್ತಿರುವ ತಹಾವುರ್ ಹುಸೈನ್ ರಾಣಾ ಮೂಲ ಹೆಸರು ದಾವುದ್ ಗಿಲಾನಿ. 2005ರಲ್ಲಿ ಡೆನ್ಮಾರ್ಕ್‌ನ ಪತ್ರಿಕೆಯೊಂದು ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ವ್ಯಂಗ್ಯಚಿತ್ರ ಪ್ರಕಟಿಸಿತ್ತು. ಆ ಪತ್ರಿಕಾ ಕಛೇರಿಯ ಮೇಲೆ ದಾಳಿ ನಡೆಸಲು ಒಳಸಂಚು ರೂಪಿಸಿರುವ ಆರೋಪದಲ್ಲಿ 2009 ಅಕ್ಟೋಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ.