ಅಮೆರಿಕ ಸೇನಾಪಡೆಯಿಂದ ಹತ್ಯೆಗೀಡಾದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಮೃತದೇಹಕ್ಕೆ ಇಸ್ಲಾಮ್ ಧಾರ್ಮಿಕ ವಿಧಿವಿಧಾನಗಳ ಸಂಸ್ಕಾರದ ನಂತರ, ಆತನ ಶವ ಹೂಳಲು ಯಾವ ದೇಶವೂ ಅನುಮತಿ ನೀಡದ ಹಿನ್ನೆಲೆಯಲ್ಲಿ ಜಲಸಮಾಧಿ ಮಾಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಲಾಡೆನ್ ಮೃತದೇಹವನ್ನು ಇಸ್ಲಾಮ್ ಧಾರ್ಮಿಕ ವಿಧಿವಿಧಾನಗಳಂತೆ ಕ್ರಿಯಾವಿಧಿ ಕೈಗೊಳ್ಳಲಾಗಿತ್ತು ಎಂದು ಫೋಕ್ಸ್ ನ್ಯೂಸ್ ವರದಿ ಮಾಡಿದೆ. ಆದರೆ ಆತನ ಮೃತದೇಹವನ್ನು 24 ಗಂಟೆಯೊಳಗೆ ಹೂಳಬೇಕು ಎಂಬುದು ಇಸ್ಲಾಮ್ ನಿಯಮವಾಗಿದೆ.
ಆದರೆ ಜಗತ್ತಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಡೆನ್ ಶವ ಹೂಳಲು ಯಾವ ದೇಶವೂ ಸ್ಥಳ ನೀಡಿಲ್ಲ ಎಂಬ ಕಾರಣ ನೀಡಿರುವ ಅಮೆರಿಕದ ಅಧಿಕಾರಿಗಳು, ಲಾಡೆನ್ ಅಂತ್ಯಕ್ರಿಯೆ ಪೂರ್ಣಗೊಂಡಿದ್ದು ಶವವನ್ನು ಜಲಸಮಾಧಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿದ್ದ ಅಮೆರಿಕ ಸೇನಾಪಡೆ ಕೊನೆಗೂ ಭಾನುವಾರ ರಾತ್ರಿ ಇಸ್ಲಾಮಾಬಾದ್‌ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಐಶಾರಾಮಿ ಮನೆಯಲ್ಲಿ ಠಿಕಾಣಿ ಹೂಡಿದ್ದ ಆತನನ್ನು ಹತ್ಯೆಗೈದಿತ್ತು.